×
Ad

ಆಟೋ ಪ್ರಯಾಣಿಕನಿಂದ 11 ಲಕ್ಷ ರೂ. ದೋಚಿದ್ದ 7 ಕಳ್ಳರ ಬಂಧನ

Update: 2017-04-09 22:59 IST

ಹರಿಹರ, ಎ.9: ಪ್ರಯಾಣಿಕರನ್ನು ಆಟೋದಲ್ಲಿ ಕರೆದುಕೊಂಡು ಹೋಗುವಂತೆ ನಟಿಸಿ 11 ಲಕ್ಷ ರೂ. ದೋಚಿದ್ದ ಏಳು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಾವಣಗೆರೆ ಲೆನಿನ್ ನಗರದ ಪ್ರಸನ್ನ (25), ನಿಟ್ಟುವಳ್ಳಿಯ ಪರಮೇಶಿ(28), ಯುವರಾಜ್ (25), ಎಂ. ವರುಣ್(25), ಚಿತ್ರದುರ್ಗದ ಅನಂತ್‌ರಾಜ್ (28), ಕಾಸವನಹಳ್ಳಿಯ ಶಿವಪ್ಪ(35), ಶಿವಣ್ಣ(43) ಎನ್ನಲಾಗಿದೆ.

ಹರಿಹರದ ಪಿಎಸ್‌ಐ ಸಿದ್ದೇಗೌಡ ಹಾಗೂ ಸಿಬ್ಬಂದಿ ಗುತ್ತೂರು ಬಳಿ ಹೊಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಅಪರಾಧ ತಡೆ ಮತ್ತು ಪತ್ತೆಗಾಗಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ನಾಲ್ವರು ಪ್ರಯಾಣಿಸುತ್ತಿದ್ದ ನಂಬರ್ ಪ್ಲೇಟ್ ಇರದಿದ್ದ ಆಟೋ ತಪಾಸಣೆಗೆ ನಿಲ್ಲಿಸಲು ಸೂಚಿಸಿದಾಗ ಆಟೋದಲ್ಲಿದ್ದವರು ಪರಾರಿಯಾಗಲು ಯತ್ನಿಸಿದರು. ಅವರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ 2 ವರ್ಷಗಳ ಹಿಂದೆ ದಾವಣಗೆರೆ ಎಂಸಿಸಿ ಬಡಾವಣೆಯಲ್ಲಿ ಆಟೋ ಕದ್ದಿರುವುದಾಗಿ ತಿಳಿಸಿದ್ದಾರೆ.

ವಿಚಾರಣೆ ಮುಂದುವರಿಸಿದಾಗ 2016ರ ಎಪ್ರಿಲ್ ತಿಂಗಳಲ್ಲಿ ವ್ಯಕ್ತಿಯೊಬ್ಬರು ರಮಸಾಗರದಿಂದ ಚಿತ್ರದುರ್ಗದ ಬ್ಯಾಂಕ್ ಒಂದಕ್ಕೆ ಹಣ ಕಟ್ಟಲು ಹೋಗುತ್ತಿದ್ದ ವೇಳೆ 11 ಲಕ್ಷ ರೂ. ದೋಚಿದ ವಿಷಯ ಬಾಯ್ಬಿದ್ದಾರೆ. ಇದೇ ಪ್ರಕರಣದ ಉಳಿದ ಆರೋಪಿಗಳಾದ ದಾವಣಗೆರೆಯ ಚೇತನ್, ಕಾರ್ತೀಕ್, ರಮಸಾಗರದ ವಾಸಿ ಪಾಪ್ಪಣ್ಣ ಎಂಬವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಗಳಿಂದ ಎರಡು ಆಟೋ ರಿಕ್ಷಾ, ಒಂದು ಮೋಟರ್ ಸೈಕಲ್ ಸೇರಿದಂತೆ ಒಟ್ಟು 2 ಲಕ್ಷದ 90 ಸಾವಿರ ರೂ. ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News