ಅತಿಥಿ ಸೋಗಿನಲ್ಲಿ ಆಗಮಿಸಿ ಚಿನ್ನಾಭರಣ ಅಪಹರಿಸಿದ್ದ ಐನಾತಿ ಕಳ್ಳಿಯ ಸೆರೆ
ಶಿವಮೊಗ್ಗ, ಎ. 9: ಕಲ್ಯಾಣ ಮಂಟಪವೊಂದರಲ್ಲಿ ನಡೆ ಯುತ್ತಿದ್ದ ಮದುವೆಯೊಂದಕ್ಕೆ ಅತಿಥಿ ಸೋಗಿನಲ್ಲಿ ಆಗಮಿಸಿ, ತದನಂತರ ಕೊಠಡಿಯೊಂದರಲ್ಲಿಟ್ಟಿದ್ದ ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್ ಅಪಹರಿಸಿ ಪರಾರಿಯಾಗಿದ್ದ ಮಹಿಳೆಯೋರ್ವಳನ್ನು, ಘಟನೆ ನಡೆದ ಕೇವಲ 24 ಗಂಟೆಗಳ ಅವಧಿಯಲ್ಲಿಯೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಲಷ್ಕರ್‌ಮೊಹಲ್ಲಾ ಬಡಾವಣೆಯ ಬ್ಯಾಡರಕೇರಿಯ ನಿವಾಸಿ ರೇವತಿ (35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆಪಾದಿತೆ ಕಳವು ಮಾಡಿದ್ದ 1.25 ಲಕ್ಷ ರೂ. ವೌಲ್ಯದ 51 ಗ್ರಾಂ. ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ಅಭಿನವ್ ಖರೆ, ಹೆಚ್ಚುವರಿ ಎಸ್ಪಿ. ಮುತ್ತುರಾಜ್ ಮಾರ್ಗದರ್ಶನದಲ್ಲಿ ಕೋಟೆ ಠಾಣೆ ಇನ್‌ಸ್ಪೆಕ್ಟರ್ ಕೆ. ಚಂದ್ರಪ್ಪ, ಸಬ್ ಇನ್‌ಸ್ಪೆಕ್ಟರ್ ರಾಮ್‌ಕುಮಾರ್ ಮತ್ತವರ ಸಿಬ್ಬಂದಿಗಳನ್ನೊಳಗೊಂಡ ನೇತೃತ್ವದ ಪೊಲೀಸ್ ತಂಡ ಆಪಾದಿತೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಘಟನೆ ಹಿನ್ನೆಲೆ: ಮೈಸೂರಿನ ಕೆ.ಆರ್.ಮೊಹಲ್ಲಾದ ನಿವಾಸಿ, ಶಿಕ್ಷಕ ವೃತ್ತಿಯಲ್ಲಿರುವ ವೀಣಾ ಎಂಬವರು ಎ.7ರಂದು ಮಾವನ ಮಗನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ ನಗರದ ಬಿ.ಎಚ್.ರಸ್ತೆಯಲ್ಲಿರುವ ಗಾಯಿತ್ರಿ ಮಾಂಗಲ್ಯ ಮಂದಿರಕ್ಕೆ ಆಗಮಿಸಿದ್ದರು. ಕಲ್ಯಾಣ ಮಂಟಪದ ಕೊಠಡಿಯೊಂದರಲ್ಲಿ ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗ್‌ನ್ನಿಟ್ಟಿದ್ದರು. ಅತಿಥಿ ಸೋಗಿನಲ್ಲಿ ಇದೇ ಕಲ್ಯಾಣ ಮಂಟಪಕ್ಕೆ ಆಗಮಿಸಿದ ಆಪಾದಿತೆ ರೇವತಿಯು ಊಟ ಮಾಡಿದ ನಂತರ ಬಟ್ಟೆ ಬದಲಾಯಿಸುವ ಸೋಗಿನಲ್ಲಿ ಕೊಠಡಿಗೆ ಪ್ರವೇಶಿಸಿದ್ದಾಳೆ. ತದನಂತರ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್ ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಳು. ವ್ಯಾನಿಟಿ ಬ್ಯಾಗ್ ನಾಪತ್ತೆಯಾಗಿರುವುದನ್ನು ಗಮನಿಸಿದ ವೀಣಾ ತಕ್ಷಣವೇ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎಫ್‌ಐಆರ್ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಕಲ್ಯಾಣ ಮಂಟಪದಲ್ಲಿ ಅಳವಡಿಸಿದ್ದ ಸಿ.ಸಿ. ಕ್ಯಾಮರಾದ ದೃಶ್ಯಾವಳಿಗಳ ಪರಿಶೀಲನೆ ನಡೆಸಿದರು. ಈ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರೇವತಿಯ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಆಕೆಯ ಹೆಸರು ಸೇರಿದಂತೆ ಇತರ ಯಾವುದೇ ಮಾಹಿತಿ ಪೊಲೀಸರಿಗಿರಲಿಲ್ಲ. ಸಿ. ಸಿ. ಕ್ಯಾಮರಾ ದೃಶ್ಯಾವಳಿ ಯಿಂದ ಭಾವಚಿತ್ರ ಸಂಗ್ರಹಿಸಿ ಪೊಲೀಸರು ಕೂಲಂಕಷ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ ರಾಜ್ಯದ ವಿವಿಧ ಕಲ್ಯಾಣ ಮಂಟಪಗಳಲ್ಲಿ ನಡೆದ ಇದೇ ಮಾದರಿಯ ಕೃತ್ಯ ಗಳಲ್ಲಿ ಭಾಗಿಯಾಗಿದ್ದ ವಿವರ, ಅದರಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿವರ ಕಲೆ ಹಾಕುವ ಮೂಲಕ ಪೊಲೀಸರು ಆಪಾದಿತೆಯನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.