ತಳಪಾಯ ರಾಜಕಾರಣ ಗಟ್ಟಿ ಮಾಡಿಕೊಂಡರೆ ಗೆಲುವು ಖಚಿತ: ಸಾಹಿತಿ ದೇವನೂರ ಮಹದೇವ

Update: 2017-04-09 17:41 GMT

ಶಿವಮೊಗ್ಗ, ಎ.9: ಫ್ಯಾಸಿಸಂ-ಮೂಲಭೂತವಾದವನ್ನು ಬದಿಗಿಟ್ಟು ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ವಿಮರ್ಶೆ ನಡೆಸುವುದಾದರೆ, ಅದರ ಹಿಂದೆ ಬಿಜೆಪಿ ತಳಪಾಯ ರಾಜಕಾರಣದ ಶ್ರಮ ಅರ್ಥವಾಗುತ್ತದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನುವಿಸಿದ ನಂತರ ಉತ್ತರ ಪ್ರದೇಶದ ಪ್ರತಿ ಬೂತ್‌ ಮಟ್ಟದಲ್ಲೂ ತಳಪಾಯ ರಾಜಕಾರಣಕ್ಕೆ ಆ ಪಕ್ಷ ಒತ್ತು ನೀಡಿತು. ಚಳವಳಿಗಾರರು, ಹೋರಾಟಗಾರರಿಗೆ ರಾಜಕೀಯದ ನಾಡಿ ಮಿಡಿತ ಬೇಗ ಅರ್ಥವಾಗುವುದಿಲ್ಲ. ರೈತ ಸಂಘ, ದಲಿತ ಸಂಘಟನೆಗಳು ಸಾಕಷ್ಟು ಜನಪರ ಚಳವಳಿ ರೂಪಿಸಿದ್ದರೂ, ರಾಜಕೀಯ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಸರ್ವೋದಯ ಪಕ್ಷ ಕೂಡ ಚುನಾವಣೆ ಎದುರಿಸುವಲ್ಲಿ ವಿಫಲವಾಯಿತು. ಆದ್ದರಿಂದ ತಳಪಾಯ ರಾಜಕಾರಣ ಗಟ್ಟಿ ಮಾಡಿಕೊಂಡರೆ ಗೆಲುವು ಖಚಿತ ಎಂದು ಸಾಹಿತಿ ದೇವನೂರ ಮಹದೇವ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪ್ರೆಸ್ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಮೊದಲು ಚಳವಳಿಗಾರರ ದೃಷ್ಟಿಕೋನಗಳು ಶಾಸನಸಭೆ, ಸಂಸತ್‌ ನತ್ತಲೇ ಕೇಂದ್ರೀಕೃತವಾಗಿದ್ದವು. ತಳಪಾಯ ರಾಜಕಾರಣದ ಮಹತ್ವ ಅರ್ಥಮಾಡಿಕೊಳ್ಳಲು ಮುಂದಾಗಲಿಲ್ಲ. ಇದರಿಂದ ಸತತವಾಗಿ ಸೋಲನುಭವಿಸಬೇಕಾಯಿತು. ಇದರ ಆತ್ಮಾವಲೋಕನವಾಗಿದ್ದು, ರಾಜಕಾರಣ ಹಾಗೂ ಚುನಾವಣೆಗಳ ದೃಷ್ಟಿಕೋನಗಳು ಬದಲಾಗಿವೆ. ಚಳವಳಿಗಾರರು ತಳಮಟ್ಟದ ರಾಜಕಾರಣ ಗಟ್ಟಿ ಮಾಡಿಕೊಳ್ಳುವುದರತ್ತ ಗಮನಹರಿಸುತ್ತಿದ್ದಾರೆ. ಇದರ ಜೊತೆಗೆ ಹಳೆಯ ವಿಚಾರಗಳನ್ನೆಲ್ಲಾ ಮರೆತು ಹೊಸತನದ ರಾಜಕಾರಣಕ್ಕೆ ಮುಂದಾಗಬೇಕಾಗಿದೆ ಎಂದರು.

ದಕ್ಷಿಣಾಯನದ ಮೂಲಕ ಭಾರತದ ಸಾಂಸ್ಕೃತಿಕ ಪ್ರಜ್ಞೆ, ವಿವೇಕ ಜಾಗೃತಗೊಳಿಸುವ ಕೆಲಸ ನಡೆಯುತ್ತಿದೆ. ಜನರಿಗೆ ಹೊಸ ದಿಕ್ಕು ತೋರುತ್ತಿದೆ ಎಂದು ಇದೇ ಸಂದರ್ಭ  ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮವಾಗಿ ಬೆಳೆದಿರುವ ಮಾಧ್ಯಮ ಕ್ಷೇತ್ರ!

ಮಾಧ್ಯಮ ಕ್ಷೇತ್ರವು ಉದ್ಯಮವಾಗಿ ಬೆಳೆದು ನಿಂತಿದೆ. ಪ್ರಸ್ತುತ ಶಿಕ್ಷಣ ನೀತಿಗಳನ್ನು ಬಂಡವಾಳಶಾಹಿಗಳು ರೂಪಿಸುತ್ತಿದ್ದಾರೆ. ಸಾಮಾಜಿಕ ಸೇವೆ-ಹಿತಾಸಕ್ತಿ ಆಧಾರಿತ ಆರೋಗ್ಯ, ಶಿಕ್ಷಣ ಕ್ಷೇತ್ರಗಳು ಖಾಸಗಿ ಪಾಲಾಗುತ್ತಿವೆ. ಸರಕಾರಗಳು ಖಾಸಗೀಕರಣದತ್ತ ಒಲವು ತೋರುತ್ತಿವೆ. ಇವೆಲ್ಲವು ಕಳವಳಕಾರಿ ಸಂಗತಿಯಾಗಿದೆ

-ದೇವನೂರ ಮಹದೇವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News