ಹೆದ್ದಾರಿ ಬದಿ ಗುಂಡಿಮುಚ್ಚಲು ಆಗ್ರಹ
ಮೂಡಿಗೆರೆ, ಎ.10: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಖಾಸಗಿ ದೂರವಾಣಿ ಕಂಪೆನಿ ಬೃಹತ್ ಗಾತ್ರದ ಗುಂಡಿ ನಿರ್ಮಿಸಿ, ಅದನ್ನು ಮುಚ್ಚದೇ ಹಾಗೆಯೇ ಬಿಟ್ಟಿರುವುದರಿಂದ ವಾಹನ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯುಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಒಎಫ್‌ಸಿ ತಂತಿ ಅಳವಡಿಸಲು ಖಾಸಗಿ ದೂರವಾಣಿ ಕಂಪೆನಿಯೊಂದು ಮೂರು ತಿಂಗಳ ಹಿಂದೆ ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 234 ಬದಿಯಲ್ಲಿ ಚರಂಡಿ ನಿರ್ಮಿಸಿ ಒಎಫ್‌ಸಿ ತಂತಿ ಹೂಳಲಾಗಿತ್ತು. ನಂತರ ಚರಂಡಿ ಮುಚ್ಚಲಾಗಿತ್ತು. ಅದೇ ವೇಳೆ ತಂತಿಯ ತುದಿಯ ಕೊಂಡಿ ಜೋಡಿಸಲು ಮೂಡಿಗೆರೆ ಸಮೀಪದ ಹ್ಯಾಂಡ್‌ಪೋಸ್ಟ್‌ನ ಜನನಿಬೀಡ ಪ್ರದೇಶ ಸೇರಿದಂತೆ ಹೆದ್ದಾರಿಯ ಉದ್ದಕ್ಕೂ ಭಾರೀ ಗಾತ್ರದ ಗುಂಡಿಗಳನ್ನು ನಿರ್ಮಿಸಲಾಗಿತ್ತು.
ತಂತಿಯ ಕೊಂಡಿ ಜೋಡಿಸಿದ ನಂತರ ಗುಂಡಿ ಮುಚ್ಚದೇ ಹಾಗೆಯೇ ಉಳಿಸಲಾಗಿದ್ದು, ಮೂರು ತಿಂಗಳಿನಿಂದ ಗುಂಡಿ ತೋಡಿದವರು ನಾಪತ್ತೆಯಾಗಿದ್ದಾರೆ. ಇದರಿಂದ ವಾಹನಗಳು ಗುಂಡಿಯೊಳಗೆ ಬೀಳುವ ಅಪಾಯವಿದೆ. ಕೂಡಲೇ ಈ ಗುಂಡಿಯನ್ನು ಖಾಸಗಿ ದೂರವಾಣಿ ಕಂಪೆನಿಯವರು ಮುಚ್ಚಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.