×
Ad

154 ದಿನಗಳ ಕೊಬ್ಬರಿ ಬೆಂಬಲ ಬೆಲೆ ಹೋರಾಟ ಹಿಂಪಡೆದ ರೈತ ಸಂಘ

Update: 2017-04-10 23:07 IST

ಹುಳಿಯಾರು, ಎ.10: ಹುಳಿಯಾರು ಎಪಿಎಂಸಿ ಬಳಿ ಕೊಬ್ಬರಿ ಬೆಲೆಗೆ ಒತ್ತಾಯಿಸಿ 154 ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಹೋರಾಟವನ್ನು ರಾಜ್ಯ ರೈತ ಸಂಘ ಹಿಂಪಡೆದಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದರು.

ಹುಳಿಯಾರಿನ ಧರಣಿ ಸ್ಥಳಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ,ನಮ್ಮನ್ನಾಳುವ ಜನಪ್ರತಿನಿಧಿಗಳು ಮಾನವೀಯ ಮೌಲ್ಯ, ಸೂಕ್ಷ್ಮತೆ, ಕಳಕಳಿ ಕಳೆದುಕೊಂಡು ಜಡತ್ವ ಮೈಗೂಡಿಸಿಕೊಂಡಿದ್ದಾರೆ.ಇಂತಹವರ ಎದುರು ಸಣ್ಣಪುಟ್ಟ ಧರಣಿ ಮಾಡಿದರೆ ಮನ್ನಣೆ ಸಿಗುವುದಿಲ್ಲ.ಹಾಗಾಗಿ ರಾಜ್ಯ ರೈತ ಸಂಘ ಇಡೀ ರಾಜ್ಯದ ರೈತರನ್ನು ಕಟ್ಟಿಕೊಂಡು ಬೃಹತ್ ಹೋರಾಟಕ್ಕೆ ಧುಮುಕುತ್ತದೆ. ಆದರೂ ಸಣ್ಣಪುಟ್ಟ ಚಳವಳಿಗಳಿಂದ ಜನಜಾಗೃತಿ ಮೂಡಲಿ ಎನ್ನುವ ಕಾರಣದಿಂದ ಅಲ್ಲಲ್ಲಿ ಚಳವಳಿ ಮಾಡಿದರೂ ಬೆಂಬಲ ನೀಡುತ್ತದೆ. ಇದಕ್ಕೆ ಹುಳಿಯಾರು ಕೊಬ್ಬರಿ ಹೋರಾಟ ಸಹ ಒಂದಾಗಿದ್ದು ಈ ಹೋರಾಟ ಸಹ ಜನಜಾಗೃತಿ ಮೂಡಿಸುವಲ್ಲಿ,ಸರಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಸಫಲವಾಗಿದೆ ಎಂದರು.

ಉತ್ತರ ಪ್ರದೇಶದಲ್ಲಿ ರೈತರ ಸಾಲಮನ್ನಾ ಮಾಡಿರುವ ಮಾನದಂಡದಲ್ಲೇ ದೇಶದ ರೈತರ ಸಾಲಮನ್ನಾವನ್ನು ಪ್ರಧಾನಿ ಮಾಡಬೇಕು. ಜೊತೆಗೆ ರಾಜ್ಯ ಸರಕಾರ ಕೂಡ ಸಹಕಾರ ಸಂಘಗಳ ಸಾಲ ಮನ್ನಾ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ವಿಚಾರವಾಗಿ ಅನಗತ್ಯವಾಗಿ ರಿಸರ್ವ್ ಬ್ಯಾಂಕ್ ಗವರ್ನರ್ ಮೂಗು ತೂರಿಸುವುದನ್ನು ನಿಲ್ಲಿಸಬೇಕು ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್, ಜಿಲ್ಲಾ ರೈತ ಸಂಘದ ಶಂಕರಣ್ಣ, ತಾಲೂಕು ರೈತ ಸಂಘದ ಲೋಕೇಶ್, ವರ್ತಕರ ಸಂಘದ ಎಂಎಸ್‌ಆರ್ ನಟರಾಜು, ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್, ವಕ್ಫ್ ಬೋರ್ಡ್ ಸದಸ್ಯ ಸಜ್ಜಾದ್, ರೈತ ಸಂಘದ ಕೆ.ಪಿ.ಮಲ್ಲೇಶ್, ದಸೂಡಿ ನಾಗರಾಜು, ತಮ್ಮಡಿಹಳ್ಳಿ ಮಲ್ಲಿಕಾರ್ಜುನ್, ಕಾಡಿನರಾಜ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News