ವ್ಯಾಪಾರೀಕರಣಗೊಂಡ ವೈದ್ಯಕೀಯ ಸೇವೆ

Update: 2017-04-10 18:57 GMT

ದೇಶದಲ್ಲಿ ಜಾಗತೀಕರಣದ ಶಕೆ ಆರಂಭವಾದ ನಂತರ ಕಲ್ಯಾಣ ರಾಜ್ಯದ ಜನಪರ ಯೋಜನೆಗಳೆಲ್ಲ ತಲೆಕೆಳಗಾದವು. ಮುಂಚೆ ಜನಸಾಮಾನ್ಯರಿಗೆ ಉಚಿತವಾಗಿ ಇಲ್ಲವೇ ಕಡಿಮೆ ದರದಲ್ಲಿ ಸಿಗುತ್ತಿದ್ದ ಶೈಕ್ಷಣಿಕ ಸೇವೆ ಮತ್ತು ವೈದ್ಯಕೀಯ ಸೇವೆ ಈಗ ವ್ಯಾಪಾರದ ಸರಕಾಗಿದೆ. ಒಂದು ಕಾಲದಲ್ಲಿ ‘‘ರೋಗಿ ದೇವೋಭವ’’ ಎಂಬ ಬೋರ್ಡನ್ನು ಹಾಕಿ ವೈದ್ಯರು ಕುಳಿತಿರುತ್ತಿದ್ದರೆ, ಈಗಿನ ಅನೇಕ ವೈದ್ಯರು ರೋಗಿಗಳ ಪಾಲಿಗೆ ಯಮಕಿಂಕರರಾಗಿದ್ದಾರೆ. ಸರಕಾರಿ ಆಸ್ಪತ್ರೆಗಳಿರಲಿ, ಖಾಸಗಿ ಆಸ್ಪತ್ರೆಗಳಿರಲಿ ಹಣವಿಲ್ಲದೆ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ದೊರೆಯುವುದಿಲ್ಲ. ಖಾಸಗಿ ಆಸ್ಪತ್ರೆಗಳಂತೂ ಶೋಷಣೆಯ ತಾಣಗಳಾಗಿವೆ.

ಸರಕಾರಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ವೈದ್ಯರೇ ಇರುವುದಿಲ್ಲ. ಅಲ್ಲಿ ಕೆಲಸದ ಮೇಲೆ ಇರಬೇಕಾದ ವೈದ್ಯರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಇನ್ಯಾವುದೋ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಹೋಗಿರುತ್ತಾರೆ. ಇದರಿಂದಾಗಿ ಜನಸಾಮಾನ್ಯರಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಈಗ ದುಬಾರಿಯಾಗಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕುವ ಮಾತನ್ನು ಆರೋಗ್ಯ ಸಚಿವ ರಮೇಶ್ ಕುಮಾರ್ ಇತ್ತೀಚೆಗೆ ಆಡಿದ್ದರು. ಸರಕಾರಿ ಆಸ್ಪತ್ರೆಗಳ ಸೇವಾ ಸ್ಥಿತಿಗತಿಗಳ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ವೈದ್ಯಕೀಯ ಸೇವೆಯನ್ನು ಸುಧಾರಿಸುವುದು ಕಷ್ಟದ ಕೆಲಸವಾಗಿದೆ.

ಅನೇಕ ಸಂದರ್ಭಗಳಲ್ಲಿ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಬಂದವರು, ಆತ ಬದುಕದೇ ಇದ್ದಾಗ ಹತಾಶರಾಗಿ ವೈದರ ಮೇಲೆ ಹಲ್ಲೆ ಮಾಡುತ್ತಾರೆ. ಈ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಈ ಹಲ್ಲೆಗಳ ವಿರುದ್ಧ ಮಹಾರಾಷ್ಟ್ರದಲ್ಲಿ ವೈದ್ಯರು ಇತ್ತೀಚೆಗೆ ಮುಷ್ಕರ ನಡೆಸಿದ್ದರು. ಪಶ್ಚಿಮಬಂಗಾಳದಲ್ಲೂ ಇಂತಹ ಘಟನೆಗಳು ನಡೆದಿವೆ. ಅಲ್ಲಿನ ಸರಕಾರ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳ ಕಾರ್ಯನಿರ್ವಹಣೆಯ ಮೇಲೆ ನಿಯಂತ್ರಣ ಹೇರುವ ವಿಧೇಯಕವನ್ನು ಅಂಗೀಕರಿಸಿದೆ. ಆದರೆ, ವೈದ್ಯರು ಇದನ್ನು ವಿರೋಧಿಸಿದ್ದಾರೆ. ಕರ್ನಾಟಕದಲ್ಲೂ ಇಂತಹ ವಿಧೇಯಕ ತರುವ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸೇವೆಯನ್ನು ಜನಪರಗೊಳಿಸು ವುದು, ಸುಧಾರಿಸುವುದು ತುಂಬಾ ಅಗತ್ಯವಾಗಿದೆ. ಇನ್ನು ಖಾಸಗಿ ಆಸ್ಪತ್ರೆಗಳು ಲಾಭದ ಉದ್ದೇಶ ಹೊಂದಿವೆ.

ಅಲ್ಲಿಗೆ ಜನಸಾಮಾನ್ಯರು ಹೋದರೆ ಅನಗತ್ಯವಾಗಿ ನಾನಾ ಪರೀಕ್ಷೆಗಳ ನೆಪದಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂಬ ಟೀಕೆ ಇದೆ. ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಇಂತಹ ವೈದ್ಯಕೀಯ ಸೌಲಭ್ಯಗಳಿಲ್ಲ. ಗ್ರಾಮೀಣ ಪ್ರದೇಶದ ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿ ಇನ್ನೂ ದಾರುಣವಾಗಿದೆ. ಅಲ್ಲಿ ನೇಮಕಗೊಂಡ ವೈದ್ಯರು ಕರ್ತವ್ಯದಲ್ಲಿರುವುದಿಲ್ಲ. ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ರೋಗಿಗಳಿಗೆ ದಾದಿಯರು ಚಿಕಿತ್ಸೆ ನೀಡುತ್ತಾರೆ. ಹತ್ತಿರದ ನಗರಗಳಲ್ಲಿ ಮನೆಮಾಡಿಕೊಂಡ ವೈದ್ಯರು ಯಾವಾಗಲಾದರೂ ಒಮ್ಮೆ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನ ತೀವ್ರ ತೊಂದರೆಗೊಳಗಾಗಿದ್ದಾರೆ. ಒಂದೆಡೆ ಖಾಸಗಿ ಆಸ್ಪತ್ರೆಗಳ ಶೋಷಣೆ ಇನ್ನೊಂದೆಡೆ ಸರಕಾರಿ ಆಸ್ಪತ್ರೆಗಳ ದುರವಸ್ಥೆ ಇದರಿಂದಾಗಿ ಬಡರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿವೆ. ಪ್ರತೀ ಕಾಯಿಲೆಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ದೇಶದ ತುಂಬಾ ನಾಯಿಕೊಡೆಗಳಂತೆ ತಲೆ ಎತ್ತಿರುವ ಮೆಡಿಕಲ್ ಕಾಲೇಜುಗಳಿಂದ ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ವೈದ್ಯರಾಗಿ ಹೊರಬರುತ್ತಿದ್ದಾರೆ.

ಇಷ್ಟೆಲ್ಲ ಬದಲಾವಣೆ ಆಗಿದ್ದರೂ ಜನಸಾಮಾನ್ಯರ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಸರಕಾರ ಶಾಸನದ ಮೂಲಕ ನಿರ್ಬಂಧ ಹೇರಲು ಹೊರಟರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ರೋಗಿಯ ಸಾವು ಸೇರಿದಂತೆ ಎಲ್ಲ ಲೋಪಗಳಿಗೂ ವೈದ್ಯರನ್ನೇ ಬಲಿಪಶು ಮಾಡಿದರೆ ಹೇಗೆ ಎಂಬುದು ವೈದ್ಯರ ಆಕ್ಷೇಪವಾಗಿದೆ. ವೈದ್ಯರಿಗೂ ಅನೇಕ ಸಮಸ್ಯೆಗಳಿವೆ. ಅವರಿಗೆ ಬರುವ ಸಂಬಳ ಸಾಲುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ಸೂಕ್ತ ಸೌಲಭ್ಯಗಳಿಲ್ಲ. ಇವೆಲ್ಲ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಅವರ ಅಪೇಕ್ಷಿತ ಸಂಬಳ ನೀಡಬೇಕಾಗಿರುವುದರಿಂದ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗುತ್ತದೆ ಎಂಬುದು ಖಾಸಗಿ ಆಸ್ಪತ್ರೆಗಳ ಅಳಲಾಗಿದೆ. ಹೀಗಾದರೆ ಪರಿಸ್ಥಿತಿಯನ್ನು ಸರಿಪಡಿಸುವುದು ಹೇಗೆ? ಮರಣೋನ್ಮುಖನಾದ ರೋಗಿಯನ್ನು ಆಸ್ಪತ್ರೆಗೆ ತಂದು ಆತ ಬದುಕದಿದ್ದರೆ ವೈದ್ಯರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ ಎಂಬುದು ಅನೇಕ ವೈದ್ಯರ ಅಭಿಪ್ರಾಯವಾಗಿದೆ.

ಅಂತಲೇ ಮಹಾರಾಷ್ಟ್ರದ ವೈದ್ಯರು ಮುಷ್ಕರಕ್ಕೆ ಇಳಿದಿದ್ದರು. ಇನ್ನು ಕೆಲವು ಕಡೆ ಹೆಲ್ಮೆಟ್ ಧರಿಸಿ ಕೆಲಸಮಾಡುತ್ತಿದ್ದಾರೆ. ರೋಗಿಗಳ ಸಂಬಂಧಿಕರಿಂದ ಹಲ್ಲೆ ನಡೆದರೆ ಎಲ್ಲ ಕಡೆ ಪೊಲೀಸರು ರಕ್ಷಣೆಗೆ ಬರಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ವೈದ್ಯರು ಕೂಡಾ ವ್ಯಾಪಾರಿ ಮನೋಭಾವ ಬಿಟ್ಟು ಸೇವಾ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಇನ್ನು ಖಾಸಗಿ ಆಸ್ಪತ್ರೆಯ ಕಾರ್ಯನಿರ್ವಹಣೆಯ ಮೇಲೆ ನಿರ್ಬಂಧ ಹೇರುವುದು ಅಷ್ಟು ಸುಲಭದ ಮಾತಲ್ಲ. ಭಾರತೀಯ ವೈದ್ಯಕೀಯ ಮಹಾಮಂಡಲ ಕೂಡಾ ಇದನ್ನು ವಿರೋಧಿಸಿದೆ. ಆದ್ದರಿಂದ ಸರಕಾರ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಮೊದಲು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅವುಗಳ ಸಿಬ್ಬಂದಿ ಕೊರತೆಯನ್ನು ನಿವಾರಿಸಬೇಕಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಗಳು ಜನಸಾಮಾನ್ಯರಿಗೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳಿವೆ.

ಅವುಗಳನ್ನು ಸರಿ ಪಡಿಸಬೇಕು. ಆದರೆ, ಜಾಗತೀಕರಣದ ಆರ್ಥಿಕ ನೀತಿಗಳನ್ನು ಒಪ್ಪಿಕೊಂಡ ಸರಕಾರ ಈ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಹೇಳುವುದು ಸುಲಭವಲ್ಲ. ಒಟ್ಟು ವೈದ್ಯಕೀಯ ಸೇವೆಯನ್ನು ಸರಿಪಡಿಸಬೇಕಾದರೆ ಸರಕಾರವು ನಿರ್ದಿಷ್ಟ ಚಿಕಿತ್ಸಾ ಶುಲ್ಕವನ್ನು ನಿಗದಿಪಡಿಸಬೇಕು. ಪೂರ್ವ ನಿರ್ಧರಿತ ಶುಲ್ಕಗಳು ಎಲ್ಲ್ಲಾ ಕಡೆ ಜಾರಿಗೆ ಬರಬೇಕು. ಆದರೆ, ಈ ಶುಲ್ಕಗಳನ್ನು ಅತ್ಯಂತ ವಿವೇಚನೆಯಿಂದ ನಿಗದಿ ಮಾಡಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಉಪಯೋಗಿಸುವ ಯಂತ್ರೋಪಕರಣಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಅವಕಾಶ ನೀಡಬಾರದು. ಅನಗತ್ಯ ಚಿಕಿತ್ಸೆಗಳು, ದುಬಾರಿ ಔಷಧಿಯ ಶಿಫಾರಸು ಮಾಡುವುದಕ್ಕೂ ನಿರ್ಬಂಧ ವಿಧಿಸಬೇಕು. ಅಲ್ಲದೆ, ಶುಲ್ಕಗಳನ್ನು ಪ್ರತೀ ವರ್ಷ ಪರಿಷ್ಕರಿಸಲು ಅವಕಾಶವಿರಬೇಕು. ಏಕರೂಪದ ವೈದ್ಯಕೀಯ ಶುಲ್ಕ ಜಾರಿಗೆ ತರಬೇಕು. ಇವೆಲ್ಲ ಕ್ರಮಗಳನ್ನು ಕೈಗೊಂಡರೆ ವೈದ್ಯಕೀಯ ಕ್ಷೇತ್ರದ ಲೋಪದೋಷಗಳನ್ನು ಸರಿಪಡಿಸಬಹುದು.

ನರೇಂದ್ರ ಮೋದಿಯವರ ಸರಕಾರ ಜೀವ ರಕ್ಷಕ ಔಷಧಿಗಳ ಬೆಲೆಗಳನ್ನು ಕೂಡಾ ದುಬಾರಿ ಮಾಡಿರುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ಕಷ್ಟದ ದಿನಗಳು ಬರಲಿವೆ. ನಮ್ಮ ದೇಶದ ಅನೇಕ ಧಾರ್ಮಿಕ ಸಂಸ್ಥೆಗಳಲ್ಲಿ ಕೋಟ್ಯಂತರ ರೂ. ಕೊಳೆಯುತ್ತಾ ಬಿದ್ದಿವೆ. ಈ ಧಾರ್ಮಿಕ ಸಂಸ್ಥೆಗಳು ಬಡರೋಗಿಗಳಿಗಾಗಿ ಉಚಿತ ಆಸ್ಪತ್ರೆಗಳನ್ನು ಆರಂಭಿಸಬೇಕು. ಈ ನಿಟ್ಟಿನಲ್ಲಿ ಕೆಲವೇ ಕೆಲವು ಕ್ರೈಸ್ತ ಧಾರ್ಮಿಕ ಸಂಸ್ಥೆಗಳು ಕಳೆದ ಎರಡು ಶತಮಾನಗಳಿಂದ ದೇಶದಲ್ಲಿ ಕಡಿಮೆ ಬೆಲೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿವೆ. ಉಳಿದ ಧಾರ್ಮಿಕ ಸಂಸ್ಥೆಗಳು ಕೂಡಾ ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಅನುಕೂಲವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರ ವೈದ್ಯಕೀಯ ಸೇವೆಯನ್ನು ಅಗತ್ಯದ ಸೇವೆಯೆಂದು ಪರಿಗಣಿಸಬೇಕು.

ಸಾಧ್ಯವಾದಷ್ಟು ಮಟ್ಟಿಗೆ ವೈದ್ಯಕೀಯ ರಂಗವನ್ನು ರಾಷ್ಟ್ರೀಕರಣಗೊಳಿಸುವ ನಿಟ್ಟಿನಲ್ಲಿ ಯೋಚಿಸಿದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಜನಪರ ಸಂಘಟನೆಗಳು ಮತ್ತು ಸ್ವಯಂ ಸೇವಾಸಂಸ್ಥೆಗಳು ಒತ್ತಡ ತರಬೇಕಾಗಿದೆ. ರಾಜ್ಯದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಜನಪರ ಚಳವಳಿಯ ಹಿನ್ನೆಲೆಯಿಂದ ಬಂದವರು. ಅವರು ಮನಸ್ಸು ಮಾಡಿದರೆ ವೈದ್ಯಕೀಯ ಕ್ಷೇತ್ರದ ಈ ದುರವಸ್ಥೆಯನ್ನು ಸರಿಪಡಿಸಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News