ನಾನೊಬ್ಬ ಮೌಲ್ವಿ ಹಾಗೂ ಮುಸ್ಲಿಂ ಎಂಬ ಕಾರಣಕ್ಕೆ ಭಯೋತ್ಪಾದಕ ಪಟ್ಟ ಕಟ್ಟಿದರು: ಮೌಲಾನ ಶಬೀರ್

Update: 2017-04-11 13:07 GMT

ಭಟ್ಕಳ, ಎ.11: "ನಾನು ಭಾರತದ ಪ್ರಜೆಯಾಗಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಹೆಮ್ಮೆಯಿದೆ" ಎಂದು ಎಂದು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಬಂಧಿತರಾಗಿ 9 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿ, ಕೊನೆಗೂ ನಿರಪರಾಧಿಯಾಗಿ ಬಿಡುಗಡೆಯಾಗಿರುವ ಮೌಲಾನಾ ಶಬೀರ್ ಗಂಗೋಳಿ ಹೇಳಿದರು.

ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡಿದ್ದಾರೆ ಹಾಗೂ ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸರು ಅಮಾಯಕ ಶಬೀರ್ ರನ್ನು ಬಂಧಿಸಿದ್ದರು. ಸತತ 9 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದ ಶಬೀರ್ ಅವರನ್ನು  ದೋಷಮುಕ್ತಗೊಳಿಸಿ ನಿರಪರಾಧಿ ಎಂದು ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಬೀರ್, "ಜೈಲಿನಲ್ಲಿ 9 ವರ್ಷಗಳ ಕಾಲ ನರಕಯಾತನೆಯನ್ನು ಅನುಭವಿಸಿದೆ. ನಾನೊಬ್ಬ ಮೌಲ್ವಿ ಹಾಗೂ ಭಟ್ಕಳದ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕಾರಣಕ್ಕಾಗಿ ಪೊಲೀಸರು ನನ್ನನ್ನು ಬಂಧಿಸಿದರು. ಚಿತ್ರಹಿಂಸೆಯನ್ನು ನೀಡಿದರು. ವ್ಯಕ್ತಿ ಅತ್ತ ಸಾಯಬಾರದು, ಇತ್ತ ಬದುಕಬಾರದು ಎಂಬಂತೆ ಪೊಲೀಸರು ಚಿತ್ರಹಿಂಸೆ ನೀಡುತ್ತಾರೆ" ಎಂದರು.

"ಸಂಬಂಧವಿಲ್ಲದ ಪ್ರಕರಣವೊಂದರಲ್ಲಿ ನನ್ನನ್ನು ಫಿಕ್ಸ್ ಮಾಡಿದ ಪೂನಾದ ಎಟಿಎಸ್ ಕೊನೆಯವರೆಗೂ ನನಗೆ ಚಿತ್ರಹಿಂಸೆ ಚಿತ್ರಹಿಂಸೆ ನೀಡಿದೆ. ಆದರೆ ದೇಶದ ಕಾನೂನು ಕೊನೆಗೂ ನನಗೆ ನ್ಯಾಯ ಒದಗಿಸಿತು. ಕೆಳಮಟ್ಟದ ನ್ಯಾಯಾಲಯಗಳಲ್ಲಿ ನ್ಯಾಯ ಸಿಗದೆ ಇರಬಹುದು, ಆದರೆ ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯ ಇನ್ನೂ ಜೀವಂತವಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ದೇಶದ ಸಾವಿರಾರು ಮುಸ್ಲಿಂ ಯುವಕರು ತಾವು ಮಾಡದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ" ಎಂದರು.

"ಪೊಲೀಸರು ಯಾವ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಿದರು" ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೌಲಾನ ಶಬ್ಬಿರ್ "ಪೂನಾದ ಮಸೀದಿಯೊಂದರಲ್ಲಿ ನಮಾಝ್ ನಿರ್ವಹಿಸುವ ಕೆಲಸ ಮಾಡುತ್ತಿದ್ದ ನನ್ನನ್ನು ರಾತ್ರಿ ಒಂದು ಗಂಟೆಯ ಸುಮಾರಿಗೆ ಎಟಿಎಸ್ ನವರು ಬಂಧಿಸಿದರು. ಮಸೀದಿಯನ್ನು ಸುತ್ತುವರಿದಿದ್ದ ಅವರು, ನನ್ನನ್ನು ಹಾಗೂ ನನ್ನ ಬಾವನನ್ನು ಬಂಧಿಸಿದರು. ನಂತರ ನನ್ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ರಾತ್ರಿಯಿಡೀ ಹಲ್ಲೆ ನಡೆಸಿದರು. ಚಿತ್ರಹಿಂಸೆ ನೀಡಿದರು. ಗುಪ್ತಾಂಗಕ್ಕೆ ಕೆಮಿಕಲ್ ಹಾಕಿ ಹಿಂಸಿಸಿದರು. ಭಯೋತ್ಪಾದನೆ ಆರೋಪದಡಿ ಪ್ರಕರಣ ದಾಖಲಿಸಿದರು. ಯಾವುದೇ ಸಾಕ್ಷ್ಯ ದೊರೆಯದೆ ಇದ್ದಾಗ ನಕಲಿ ನೋಟು ಸಾಗಾಟ ಪ್ರಕರಣ ಸೃಷ್ಟಿಸಿ ಸರ್ಕಾರಿ ಅಧಿಕಾರಿಯೇ ನನ್ನ ವಿರುದ್ಧ ಸಾಕ್ಷಿ ನುಡಿಯುವಂತೆ ಮಾಡಿ ಜೈಲಿಗಟ್ಟಿದ್ದರು" ಎಂದರು.

ಇದೀಗ ಎಲ್ಲರ ಪ್ರಕರಣಗಳಿಂದ ಹಾಗೂ ಜೈಲಿನ ನರಕಯಾತನೆಯಿಂದ ಮುಕ್ತಿ ಹೊಂದಿದ್ದೇನೆ. ದೇಶದ ಕಾನೂನಿನ ಬಗ್ಗೆ ತನಗೆ ಅಪಾರ ಗೌರವವಿದೆ ಎಂದು ಶಬೀರ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News