ವಿದ್ಯಾರ್ಥಿ ನಿಲಯದಿಂದ ಮಕ್ಕಳನ್ನು ಹೊರಹಾಕಿದ ಪ್ರಾಂಶುಪಾಲೆ: ರಾತ್ರಿಯಿಡೀ ಹೊರಗಡೆ ಕೂತ ವಿದ್ಯಾರ್ಥಿಗಳು

Update: 2017-04-11 15:39 GMT

ಮಂಡ್ಯ, ಎ.11: ಪ್ರಾಂಶುಪಾಲೆಯೊಬ್ಬರು ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ಹೊರಹಾಕಿದ್ದು, 27 ಮಕ್ಕಳು ರಾತ್ರಿಯಿಡೀ ವಸತಿ ಶಾಲೆಯ ಹೊರಗಡೆ ಕಳೆದ ಪ್ರಕರಣ ಪಾಂಡವಪುರ ತಾಲೂಕು ಕೆರೆತೊಣ್ಣೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

ಪ್ರಾಂಶುಪಾಲೆ ಉಷಾ 27 ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ಹೊರಹಾಕಿದ್ದಾರೆ ಎನ್ನಲಾಗಿದ್ದು, ವಿಷಯ ತಿಳಿದು ಪೋಷಕರು ಸ್ಥಳಕ್ಕಾಗಮಿಸಿದ್ದಾರೆ. ಈ ಸಂದರ್ಭ ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಪ್ರಾಂಶುಪಾಲರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ವಸತಿ ಶಾಲೆಯ ಕೆಲ ವಿದ್ಯಾರ್ಥಿಗಳು ನಲ್ಲಿಗಳನ್ನು ಹಾಗೂ ಸ್ವಿಚ್ ಬೋರ್ಡ್‌ಗಳನ್ನು ಮುರಿದು ಹಾಕಿದರು ಎನ್ನುವ ಕಾರಣಕ್ಕೆ ಕೋಪಗೊಂಡ ಪ್ರಾಂಶುಪಾಲರು ಹಾಗೂ ವಾರ್ಡನ್ ನಮ್ಮನ್ನು ಹೊರಹಾಕಿದರು. ಇಡೀ ರಾತ್ರಿ ವಸತಿ ಶಾಲೆಯ ಹೊರಗಡೆಯೇ ನಾವೆಲ್ಲರೂ ಇರುವಂತಾಯಿತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಘಟನೆಯಿಂದ ಬುಧವಾರ ನಡೆಯಬೇಕಾಗಿದ್ದ ಎಸೆಸೆಲ್ಸಿ ಪರೀಕ್ಷೆಯ ಸಮಾಜ ವಿಜ್ಞಾನ ಪರೀಕ್ಷೆಗೆ ಸಿದ್ಧಗೊಳ್ಳಲು ಸಾಧ್ಯವಾಗಿಲ್ಲ. ಓರ್ವ ವಿದ್ಯಾರ್ಥಿಯ ಮೇಲೆ ಪ್ರಾಂಶುಪಾಲರು ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ಪ್ರತಿಭಟನನಿರತ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸಮಾಧಾನಪಡಿಸಿದರು. ನಂತರ, ಪ್ರಾಂಶುಪಾಲೆ ಉಷಾ ಅವರಿಂದ ಮಾಹಿತಿ ಪಡೆದರು. ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿನ ಸೋಲಾರ್ ಹೀಟರ್, ವಿದ್ಯುತ್ ಸ್ವಿಚ್ ಬೋರ್ಡ್‌ಗಳು, ನಲ್ಲಿಗಳು, ಕಿಟಕಿ ಗ್ಲಾಸ್‌ಗಳನ್ನು ಒಡೆದು ಹಾಕಿದ್ದರು. ಇದನ್ನು ಪ್ರಶ್ನಿಸಿದಕ್ಕೆ ಈ ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರಾಂಶುಪಾಲೆ ಉಷಾ ಪ್ರತಿಕ್ರಿಯೆ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್ ಅವರೂ ಸ್ಥಳಕ್ಕೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News