ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಯ ಘನತೆಗೆ ಹಾನಿ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಹೇಳಿಕೆ

Update: 2017-04-11 15:42 GMT

ಹೊಸದಿಲ್ಲಿ,ಎ.11: ತ್ರಿವಳಿ ತಲಾಖ್,ನಿಖಾ ಹಲಾಲ ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳು ಮುಸ್ಲಿಂ ಮಹಿಳೆಯರ ಸಾಮಾಜಿಕ ಸ್ಥಾನಮಾನ ಮತ್ತು ಘನತೆಗೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಸಂವಿಧಾನವು ಅವರಿಗೆ ಖಾತರಿ ಪಡಿಸಿರುವ ಮೂಲಭೂತ ಹಕ್ಕುಗಳನ್ನು ನಿರಾಕರಿಸುತ್ತವೆ ಎಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ನ್ಯಾಯಾಲಯಕ್ಕೆ ಹೊಸದಾಗಿ ಸಲ್ಲಿಸಲಾಗಿರುವ ಲಿಖಿತ ಹೇಳಿಕೆಯಲ್ಲಿ ತನ್ನ ಮೊದಲಿನ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರವು, ಸಮುದಾಯದ ಪುರುಷರಿಗೆ ಮತ್ತು ಇತರ ಸಮುದಾಯಗಳ ಮಹಿಳೆಯರಿಗೆ ಹಾಗೂ ಭಾರತದ ಹೊರಗಿನ ಮುಸ್ಲಿಂ ಮಹಿಳೆಯರಿಗೆ ಹೋಲಿಸಿದರೆ ಈ ಪದ್ಧತಿಗಳು ಮುಸ್ಲಿಂ ಮಹಿಳೆಯರನ್ನು ‘ಕಡಿಮೆ ಸಮಾನರು ಮತ್ತು ದುರ್ಬಲರನ್ನಾಗಿ ’ಮಾಡುತ್ತವೆ ಎಂದು ಹೇಳಿದೆ.

ಮುಸ್ಲಿಮರಲ್ಲಿ ಪ್ರಚಲಿತವಿರುವ ತ್ರಿವಳಿ ತಲಾಖ್,ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಗಳು ಭಾವನಾತ್ಮಕವಾಗಿದ್ದು, ಇವುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸಂವಿಧಾನ ಪೀಠವು ಮೇ 11ರಿಂದ ಆರಂಭಿಸಲಿದೆ ಎಂದು ಮಾ.30ರಂದು ಹೇಳಿತ್ತು.

 ಈ ಪದ್ಧತಿಗಳನ್ನು ಸಮಾಜದಲ್ಲಿ ಮಹಿಳೆಯ ಪಾತ್ರ ಕುರಿತು ಪುರುಷ ಪ್ರಧಾನ ವೌಲ್ಯಗಳು ಮತ್ತು ಸಾಂಪ್ರದಾಯಿಕತೆಯ ಸಂಕೇತಗಳು ಎಂದು ತನ್ನ ಹೇಳಿಕೆಯಲ್ಲಿ ಬಣ್ಣಿಸಿರುವ ಕೇಂದ್ರವು, ಮಾನವ ಘನತೆ, ಸಾಮಾಜಿಕ ಅಂತಸ್ತು ಮತ್ತು ಸ್ವ ವೌಲ್ಯಗಳ ಮಹಿಳಾ ಹಕ್ಕುಗಳು ಸಂವಿಧಾನದ 21ನೇ ವಿಧಿಯಡಿ ಆಕೆಯ ಬದುಕಿನ ಹಕ್ಕಿನ ಪ್ರಮುಖ ಮುಖಗಳಾಗಿವೆ ಎಂದು ಹೇಳಿದೆ.

 ಈ ಪದ್ಧತಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿರುವ ಸರಕಾರವು, ಕಳೆದ ಆರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಯಾವುದೇ ಸುಧಾರಣೆಗಳಾಗಿಲ್ಲ ಮತ್ತು ಜನಸಂಖ್ಯೆಯ ಶೇ.8ರಷ್ಟಿರುವ ಮುಸ್ಲಿಂ ಮಹಿಳೆಯರು ದಿಢೀರ್ ವಿಚ್ಛೇದನದ ಭೀತಿಯಿಂದ ಅತ್ಯಂತ ದುರ್ಬಲರಾಗಿಯೇ ಉಳಿದಿದ್ದಾರೆ ಎಂದು ಪ್ರತಿಪಾದಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News