×
Ad

ಅಸ್ಪ್ರಶ್ಯತೆ ಆಚರಣೆಯನ್ನು ತಡೆಯುವಂತೆ ಮನವಿ ಮಾಡಿದವರ ವಿರುದ್ಧ ನಿಂತ ಪೊಲೀಸರು: ದಲಿತ ಮುಖಂಡರ ಆರೋಪ

Update: 2017-04-12 16:00 IST

ಹಾಸನ, ಎ.12: ಜಿಲ್ಲೆಯ ಹೊಳೇನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಹರಿಹರಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜಾತ್ರೆಯಲ್ಲಿ ದಲಿತರನ್ನು ಸಿಡಿ ಕಟ್ಟಿ ಆಡಿಸುವ ಅನಾಗರಿಕ, ಅಸ್ಪ್ರಶ್ಯತೆಯ ಆಚರಣೆಯನ್ನು ತಡೆಯುವಂತೆ ಮನವಿ ಮಾಡಿದವರ ವಿರುದ್ಧವೇ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಿದ್ದಾರೆ ಎಂದು ಜಿಲ್ಲೆಯ ದಲಿತ ಮತ್ತು ಜನಪರ ಸಂಘಟನೆಗಳು ಆರೋಪಿಸಿದ್ದು, ಇಲಾಖೆಯ ಕ್ರಮವನ್ನು ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಹಿರಿಯ ದಲಿತ ಮುಖಂಡ ನಾರಾಯಣದಾಸ್, ಡಿ.ಎಚ್.ಎಸ್.  ಜಿಲ್ಲಾ ಸಂಚಾಲಕ ಎಂ.ಜಿ.ಪೃಥ್ವಿ, ಡಿವೈಎಫ್ ಐ ಜಿಲ್ಲಾಧ್ಯಕ್ಷ ವಾಸುದೇವ್ ಕಲ್ಕೆರೆ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಹ ಸಂಚಾಲಕ ಕೆ.ಎಸ್.ಮಂಜುನಾಥ್, ಜಾತ್ರೆಯಲ್ಲಿ ದಲಿತರು ಸ್ವಯಂ ಪ್ರೇರಣೆಯಿಂದ ಸಿಡಿ ಏರಿದ್ದಾರೆಂದೂ, ಅವರು ಯಾವುದೇ ಪ್ರಚೋದನೆಗೆ ಒಳಗಾಗಿಲ್ಲವೆಂದು ತಿಳಿಸಿರುತ್ತಾರೆ. ಬಾಲ್ಯ ವಿವಾಹ, ವರದಕ್ಷಿಣೆ, ಮಲ ಹೊರುವುದು, ಅಸ್ಪ್ರಶ್ಯತೆಯತಹ ಪ್ರಕರಣಗಳು ನಡೆಯುವಾಗ ಈ ಪ್ರಕರಣಗಳಲ್ಲಿ ಭಾಗಿಯಾಗಿರುವವರು ನಾವು ಸ್ವಯಂ ಪ್ರೇರಣೆಯಿಂದ ಆಚರಣೆಯಲ್ಲಿ ತೊಡಗಿದ್ದೇವೆ ಎಂದರೆ ಪೋಲೀಸರು ಸುಮ್ಮನಿರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಹರಿಹರಪುರ ಗ್ರಾಮದಲ್ಲಿ ಹಿಂದಿನಿಂದಲೂ ಉಡುಸಲಮ್ಮದೇವಿ ಜಾತ್ರೆಯ ಸಂದರ್ಭ ಚಾಕೆನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ದಲಿತರ ಬೆನ್ನಿಗೆ ಕಬ್ಬಿಣದ ಸಲಾಕೆ ಚುಚ್ಚಿಸಿ ಬಾಯಿಗೆ ಬೀಗ ಹಾಕಿಸಿ ದೊಡ್ಡ ಕಂಬಕ್ಕೆ ನೇತುಹಾಕಿ ಸಿಡಿ ಸುತ್ತಿಸುವ ಅನಿಷ್ಟ ಪದ್ದತಿ ನಡೆಯುತ್ತದೆ. ಇದೊಂದು ಅಮಾನುಷ ಆಚರಣೆಯಾಗಿದ್ದು, ಸಂಪ್ರದಾಯದ ಹೆಸರಿನಲ್ಲಿ ನಿರ್ದಿಷ್ಟವಾಗಿ ದಲಿತರನ್ನೇ ಒಳಪಡಿಸಲಾಗುತ್ತಿದೆ ಇಂತಹ ಅನಾಗರಿಕ ಆಚರಣೆಯನ್ನು ತಡೆಯಬೇಕೆಂದು ದಲಿತ ಸಂಘಟನೆಗಳು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದವು.

ದಲಿತರು ಸಿಡಿ ಏರಿರುವುದನ್ನು ದೃಢೀಕರಿಸಿರುವ ಪೊಲೀಸರು ಅದನ್ನು ತಡೆಯುವಂತೆ ಮನವಿ ಮಾಡಿಕೊಂಡಿದ್ದವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳುವ ಕುರಿತು ಹಿಂಬರಹ ನೀಡಿದ್ದಾರೆ. ಈ ಮೂಲಕ ಹೊಳೇ ನರಸಿಪುರ ಉಪ ವಿಭಾಗದ ಸಹಾಯಕ ಪೋಲೀಸ್ ಅಧೀಕ್ಷಕರು ದಲಿತ ವಿರೋಧಿ ಎನ್ನುವುದನ್ನು ನಿರೂಪಿಸಿದ್ದಾರೆ ಎಂದವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News