ಬಲಾಢ್ಯರಿಂದ ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನ ಮೇಲೆ ಗುಂಡಿನ ದಾಳಿ: ಹೋರಾಟ ಸಮಿತಿ ಆರೋಪ
ಮಡಿಕೇರಿ, ಎ.12: ಆದಿವಾಸಿಗಳು ಹಾಗೂ ದುರ್ಬಲರು ಸ್ವತಂತ್ರವಾಗಿ ಬದುಕಲು ಬಯಸುವುದನ್ನು ಅರಗಿಸಿಕೊಳ್ಳಲಾಗದ ಬಲಾಢ್ಯರು ದಿಡ್ಡಳ್ಳಿಯಲ್ಲಿ ನೆಲೆ ನಿಂತಿರುವ ನಿರಾಶ್ರಿತರ ಗುಡಿಸಲುಗಳ ಮೇಲೆ ಗುಂಡು ಹಾರಿಸಿ, ಕರಪತ್ರಗಳನ್ನು ಎಸೆಯುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಆದಿವಾಸಿ ಮುಖಂಡರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಅಮಿನ್ ಮೊಹಿಸಿನ್, ಎ.10 ರಂದು ದಿಡ್ಡಳ್ಳಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣವನ್ನು ಖಂಡಿಸಿದರು. ಪೊಲೀಸರ ಸರ್ಪಗಾವಲು ಹಾಗೂ ಗುಪ್ತಚರ ಇಲಾಖೆಯ ನಿಗಾದಲ್ಲಿ ಪೊಲೀಸ್ ಚೆಕ್ ಪೋಸ್ಟ್‌ಗಳನ್ನು ರಚಿಸಲಾಗಿದ್ದರೂ ಆಗಂತುಕರು ದಿಡ್ಡಳ್ಳಿಯಲ್ಲಿ ಗುಂಡಿನ ದಾಳಿ ನಡೆಸಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.
ಇಲ್ಲಿರುವ ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದ ಅವರು, ಗುಂಡು ಹಾರಿಸಿದವರನ್ನು ಒಂದು ವಾರದೊಳಗೆ ಬಂಧಿಸಬೇಕೆಂದು ಒತ್ತಾಯಿಸಿದರು. ಜೀತದಾಳುಗಳಂತೆ ಜೀವನ ನಡೆಸುತ್ತಿರುವ ಆದಿವಾಸಿಗಳು ಸ್ವತಂತ್ರವಾಗಿ ಬದುಕಲು ಮುಂದಾಗುತ್ತಿರುವ ಹೊತ್ತಿನಲ್ಲೆ ಇದನ್ನು ಅರಗಿಸಿಕೊಳ್ಳಲಾಗದವರು ಗುಂಡು ಹಾರಿಸಿದ್ದಾರೆ. ಹೋರಾಟದ ಆರಂಭದ ದಿನಗಳಲ್ಲೇ ಕಲ್ಲು ತೂರಾಟ ನಡೆಸಿ ಆದಿವಾಸಿಗಳಲ್ಲಿ ಒಡಕು ಮೂಡಿಸಲು ಯತ್ನಿಸಿದ್ದರು. ಆದರೆ, ಇಂದು ಗುಂಡು ಹಾರಿಸುವಂತಹ ಕುಕೃತ್ಯಕ್ಕೆ ಕೈಹಾಕಿದ್ದು, ಪೊಲೀಸರು ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಬಂಧಿಸಬೇಕು. ತಪ್ಪಿದಲ್ಲಿ ಬೃಹತ್ ಹೋರಾಟವನ್ನು ರೂಪಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಕೆ.ಎ.ಶರೀಫ್ ಮಾತನಾಡಿ, ಹಕ್ಕುಪತ್ರ ಇಲ್ಲ ಎನ್ನುವ ಕಾರಣಕ್ಕಾಗಿ ಚೆರಿಯಪರಂಬು ನಿವಾಸಿಗಳಿಗೆ ವಾಸದ ದೃಢೀಕರಣ ಪತ್ರ ನೀಡದಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ ಎಂದರು.
ಬಹುಜನ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಮೊಣ್ಣಪ್ಪ ಮಾತನಾಡಿ, ಜಿಲ್ಲಾಡಳಿತ ರಾಜಕೀಯ ಪ್ರೇರಿತವಾಗಿದ್ದು, ಬಡವರ ಪರ ಕಾಳಜಿ ಇಲ್ಲ. ಮುಖ್ಯಮಂತ್ರಿಯ ಸಮ್ಮುಖದಲ್ಲಿ ಅಧಿಕಾರಿಗಳು ಭೂಮಿಯ ವಿವಾದದ ಕುರಿತು ಸೂಕ್ತ ಉತ್ತರ ನೀಡಲು ಪರದಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಭೆಗೆ ಗೈರು ಹಾಜರಾಗಿದ್ದರು ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಆದಿವಾಸಿ ಹೋರಾಟಗಾರ ಸ್ವಾಮಿ ಅಯ್ಯಪ್ಪ ಹಾಗೂ ಪ್ರಗತಿಪರ ಚಿಂತಕರ ವೇದಿಕೆಯ ಅಲ್ಲಾರಂಡ ವಿಠಲ ನಂಜಪ್ಪ ಉಪಸ್ಥಿತರಿದ್ದರು.