ಉರ್ದು, ನವಾಯತಿ, ಬಹುಭಾಷಾ ಕವಿ ಮುಹಮ್ಮದ್ ಅಲಿ ಪರ್ವಾಝ್ ನಿಧನ
ಭಟ್ಕಳ, ಎ.12: ಕೆಲ ತಿಂಗಳುಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಹುಭಾಷಾ ಕವಿ, ಚಿಂತಕ ಮುಹಮ್ಮದ್ ಅಲಿ ಪರ್ವಾಝ್ (87) ಬುಧವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉರ್ದು, ನವಾಯತ್ ಭಾಷೆಗಳಲ್ಲದೆ ಇತರ ಭಾಷೆಗಳಲ್ಲಿಯೂ ಪಾಂಡಿತ್ಯ ಹೊಂದಿದ್ದ ಇವರು ಸುಮಾರು 500ಕ್ಕೂ ಹೆಚ್ಚು ಅಪ್ರಕಟಿತ ಕವನಗಳಲ್ಲದೆ, ಲೇಖನ, ಚಿಂತನ ಬರಹಗಳನ್ನು ಬರೆದಿದ್ದಾರೆ. ತಮ್ಮ ಸ್ವರಚಿತ ಗಝಲ್ ಗಳನ್ನು ತಾವೇ ಹಾಡಿ ಮುಷಾಯಿರಗಳನ್ನು (ಕವಿಗೋಷ್ಟಿ) ನಡೆಸುತ್ತಿದ್ದರು. ಉತ್ತಮ ಕೈಬರಹವನ್ನು ಹೊಂದಿದ್ದ ಇವರು ಮುಂಬೈಯ "ಇನ್ಕಿಲಾಬ್" ಉರ್ದು ಪತ್ರಿಕೆಯಲ್ಲಿ ಕ್ಯಾಲಿಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದರು.
ಪರ್ವಾಝ್ ರ ನಿಧನಕ್ಕೆ ನವಾಯತ್ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲಾ ದಾಮೂದಿ, ನವಾಯತ್ ಮಹೆಫಿಲ್ ನ ಜಾನ್ ಅಬ್ದುರ್ರಹ್ಮಾನ್ ಮೊಹತೆಶಂ, ಇದಾರ ಅದಬೆ-ಇ-ಇಸ್ಲಾಮಿ ಸಂಸ್ಥೆಯ ಡಾ. ಹನೀಫ್ ಶಬಾಬ್, ಖಾದಿರ್ ಮೀರಾ ಪಟೇಲ್, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ದ ಮುಸ್ತಫಾ, ಜಾಮಿಯಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮೌಲಾನ ಮಖ್ಬೂಲ್, ಅಹ್ಮದ್ ಕೊಬಟ್ಟೆ ಸೇರಿದಂತೆ ಹಲವು ಸಾಹಿತಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.