ಶಿವಮೊಗ್ಗದಲ್ಲಿ ಮುಂದುವರಿದ ಉರಿ ಬಿಸಿಲು! : 42 ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ!!
ಶಿವಮೊಗ್ಗ,ಎ.12: ’ಮಲೆನಾಡ ನಗರಿ’ ಖ್ಯಾತಿಯ ಶಿವಮೊಗ್ಗ ನಗರದಲ್ಲಿ ಸುಡು ಬಿಸಿಲು ಮುಂದುವರಿದಿದೆ. ಮತ್ತೊಂದೆಡೆ ದಿನದಿಂದ ದಿನಕ್ಕೆ ತಾಪಮಾನದ ಪ್ರಮಾಣ ಹೆಚ್ಚಾಗುತ್ತಿದ್ದಂತೆ,ಜನತೆಯಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
ಈ ತಿಂಗಳ ಆರಭಂದಿಂದ ಕೊನೆವರೆಗೂ 40 ಡಿಗ್ರಿ ಸೆಲ್ಸಿಯಸ್ ಮೇಲ್ಪಟ್ಟು ಉಷ್ಣಾಂಶ ದಾಖಲಾಗುತ್ತಿದೆ.! ಸ್ಥಳೀಯ ಹವಮಾನ ಇಲಾಖೆಯ ಮೂಲಗಳು ನೀಡುವ ಮಾಹಿತಿಯ ಪ್ರಕಾರ, ಬುಧವಾರ ನಗರದಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶದ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಆಗಿದೆ. ಉಳಿದಂತೆ ಕಳೆದ ಎ. 9 ರಂದು ನಗರದಲ್ಲಿ 42 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಪ್ರಸ್ತುತ ವರ್ಷ ನಗರದಲ್ಲಿ ದಾಖಲಾದ ಅತ್ಯಧಿಕ ತಾಪಮಾನ ಇದಾಗಿದೆ ಎಂದು ತಿಳಿಸಿದೆ.
ಕಷ್ಟಕಷ್ಟ: ಜಿಲ್ಲೆಯ ಕೆಲವೆಡೆ ಧಾರಾಕಾರ ಸ್ವರೂಪದಲ್ಲಿ ಅಕಾಲಿಕ ಮಳೆ ಬೀಳುತ್ತಿದೆ. ಆದರೆ ಶಿವಮೊಗ್ಗ ನಗರದಲ್ಲಿ ಮಾತ್ರ ಮಳೆಯಾಗುತ್ತಿಲ್ಲ. ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು ಕೆಲ ಪ್ರದೇಶದಲ್ಲಿ ತುಂತುರು ಮಳೆಯಾಗಿದ್ದು ಹೊರತುಪಡಿಸಿದರೆ ಧಾರಾಕಾರ ವರ್ಷಧಾರೆಯಾಗುತ್ತಿಲ್ಲವಾಗಿದೆ.
"ಈ ವರ್ಷ ನಗರದಲ್ಲಿ ಕಂಡುಬರುತ್ತಿರುವ ಬಿಸಿಲಿನ ಬೇಗೆ ಕಳೆದ ವರ್ಷದಲ್ಲಿ ತಾವು ನೋಡಿಲ್ಲ. ಬೇಸಿಗೆಯ ದಿನಗಳಿಂದ ನಗರದಲ್ಲಿ ಕಂಡುಬರುತ್ತಿದ್ದ ತಣ್ಣನೆಯ ಹವಾಗುಣ ಕಣ್ಮರೆಯಾಗುತ್ತಿದೆ. ಬಯಲು ಸೀಮೆ ಮೀರಿಸಿದ ತಾಪಮಾನ ಕಂಡುಬರುತ್ತಿದೆ. ಇದು ಅಚ್ಚರಿಯ ಜೊತೆಗೆ ಆತಂಕ ಕೂಡ ಉಂಟು ಮಾಡುತ್ತಿದೆ" ಎಂದು ನಗರದ ನಿವಾಸಿ, 70 ರ ವಯೋಮಾನದ ಚಂದ್ರಪ್ಪ ಅವರು ಅಭಿಪ್ರಾಯಪಡುತ್ತಾರೆ.