ದಿಡ್ಡಳ್ಳಿ ಗುಡಿಸಲುಗಳ ಮೇಲೆ ಗುಂಡು ಹಾರಿಸಿದಾತನ ಬಂಧನ
ಮಡಿಕೇರಿ ಏ.12 : ಶಾಶ್ವತ ನಿವೇಶನಕ್ಕಾಗಿ ಆಗ್ರಹಿಸಿ ಹೋರಾಟದ ರೂಪದಲ್ಲಿ ದಿಡ್ಡಳ್ಳಿಯಲ್ಲಿ ನೆಲೆಸಿರುವ ಆದಿವಾಸಿ ಕುಟುಂಬಗಳ ಗುಡಿಸಲಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.
ಮಾಲ್ದಾರೆಯ ಗೂಡ್ಲೂರು ನಿವಾಸಿ ಎ.ಪೂಣಚ್ಚ ಎಂಬಾತನೇ ಬಂಧಿತ ಆರೋಪಿ. ಕೆಲಸಕ್ಕೆ ಬರುವುದಾಗಿ ಹೇಳಿ ಸಾಲ ಪಡೆದ ಕಾರ್ಮಿಕರು ಹಣವನ್ನು ಮರುಪಾವತಿಸಲಿಲ್ಲವೆಂದು ಕೋಪಗೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಆತ ಸಮಜಾಯಿಷಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ದುಷ್ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಎ.10 ರಂದು ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿ ಗುಡಿಸಲೊಂದರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಮಳೆ ಸುರಿಯುತ್ತಿದ್ದ ಕಾರಣ ಅಂದು ಆ ಗುಡಿಸಲಿನಲ್ಲಿ ಯಾರೂ ಇರಲಿಲ್ಲವಾದ್ದರಿಂದ ಭಾರೀ ದುರ್ಘಟನೆ ತಪ್ಪಿದೆ. ಗುಂಡಿನ ಶಬ್ಧ ಕೇಳಿ ಸುತ್ತಮುತ್ತಲ ಆದಿವಾಸಿಗಳು ಗುಡಿಸಲಿನಿಂದ ಹೊರ ಬರುವಷ್ಟರಲ್ಲಿ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ದಿಡ್ಡಳ್ಳಿಯ ಪಣಿಯರವರ ಬಸವ, ತಾನು ರಾತ್ರಿ ವೇಳೆ ಮನೆಯ ಬಳಿ ಇದ್ದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಆಗಮಿಸಿ ಗುಡಿಸಲಿನತ್ತ ಗುಂಡು ಹಾರಿಸಿದ್ದ. ಈ ಶಬ್ದ ಕೇಳಿ ತಾನು ಅತ್ತ ಧಾವಿಸಿದ ಸಂದರ್ಭ ಆತ ನೇರವಾಗಿ ನನ್ನ ಮೇಲೆ ಗುಂಡು ಹಾರಿಸಲು ಯತ್ನಿಸಿದ ಎಂದು ತಿಳಿಸಿದ್ದಾರೆ.
ಹಾಡಿಯ ನಿವಾಸಿ ರಂಜು ಮಾತನಾಡಿ, ಹೋರಾಟವನ್ನು ಹತ್ತಿಕ್ಕಲು ಯಾವುದೇ ರೀತಿಯ ಷಡ್ಯಂತ್ರಗಳು ನಡೆದರೂ ಶಾಶ್ವತ ಸೂರು ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.