ಅಕ್ರಮ ಮರಳು ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ: ಜಿ. ಸತ್ಯವತಿ

Update: 2017-04-12 16:43 GMT

ಮೂಡಿಗೆರೆ,ಎ.12: ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ತನ್ನ ಗಮನಕ್ಕೆ ಬಂದಿದೆ. ಪರ್ಮಿಟ್ ಪಡೆದ ಮರಳು ಗ್ರಾಹಕರು ಮರಳು ಬಂದ ಮೇಲೆ ಪರ್ಮಿಟ್ ಪ್ರತಿಯನ್ನು ಹಿಂದೆ ಪಡೆದುಕೊಳ್ಳಬೇಕು. ಇಲ್ಲವಾದರೆ ಲಾರಿ ಮಾಲಕರ ಸಹಿತ ಮರಳು ಗ್ರಾಹಕರ ಮೇಲೆಯೂ ಪ್ರಕರಣ ದಾಖಲಿಸಬೇಕಾಗುತ್ತದೆ. ಅಲ್ಲದೇ ಹೆಚ್ಚುವರಿ ಲೋಡ್ ಹಾಕುತ್ತಿರುವುದರ ಬಗ್ಗೆ ಕೂಡ ಗಮನಕ್ಕೆ ಬಂದಿದ್ದು, ಅದನ್ನು ತಡೆಗಟ್ಟುವ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಹೇಳಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು,ನೀರಿನ ಸಮಸ್ಯೆ ಬಗ್ಗೆ ತಿಳಿಸಿದರೆ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಕೆಲವು ಜಾಗಕ್ಕೆ ಸಂಬಂಧಿಸಿದ ಪ್ರಕರಣಗಳು ಲೋಕಾಯುಕ್ತ ಇಲಾಖೆಯಲ್ಲಿದ್ದರೂ ತಮ್ಮ ವ್ಯಾಪ್ತಿಗೆ ಬರುವ ಕಾರ್ಯ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಒತ್ತುವರಿ ಸಮಸ್ಯೆ, ನೀರಿನ ಸಮಸ್ಯೆ, ಸೈನಿಕರ ನಿವೇಶನಕ್ಕೆ ಜಾಗ ಮಂಜೂರಾತಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.

ನಿವೇಶನ ಕೊರತೆ ಇರುವ ಬಗ್ಗೆ ಚರ್ಚೆ ನಡೆಸುತ್ತಿರುವಾಗ ಪಪಂ ಅಧಿಕಾರಿಗಳು ತಮಗೂ ಜಾಗದ ಸಮಸ್ಯೆ ಇದೆ. ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು. ಆಗ ಹೌಸಿಂಗ್ ಬೋರ್ಡ್ ಪ್ರಗತಿ ಮೂಡಿಗೆರೆ ಸೇರಿದಂತೆ ಎಲ್ಲಾ ಕಡೆ ಶೂನ್ಯವಾಗಿದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ ಎಂದ ಅವರು, ಕಂದಾಯ ಮತ್ತು ಡೀಮ್ಡ್ ಫಾರಿಸ್ಟ್ ಜಾಗದ ಬಗ್ಗೆ ಸಮಸ್ಯೆ ಉಂಟಾಗಿರುವುದರ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಇತ್ಯರ್ಥಗೊಳಿಸುವ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಸಂಗಪ್ಪ, ನೂತನ ತಹಶೀಲ್ದಾರ್ ನಂದ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News