ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಪಾದಯಾತ್ರೆಯನ್ನುತಡೆದ ಖಾಕಿಪಡೆ

Update: 2017-04-12 16:31 GMT

ತುಮಕೂರು, ಎ.12: ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ವೇತನ ಹೆಚ್ಚಳ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಆಗ್ರಹಿಸಿ ಹಮ್ಮಿಕೊಂಡಿದ್ದ ಮುನಿರಾಬಾದ್ ನಿಂದ ಬೆಂಗಳೂರು ಪಾದಯಾತ್ರೆ ತುಮಕೂರು ತಲುಪುವ ಮೊದಲೇ ಪೊಲೀಸರು ಹೋರಾಟಗಾರರನ್ನು ತಡೆದಿದ್ದಾರೆ.

ಮಾರ್ಚ್ 17 ರಿಂದ 1,374ಕ್ಕೂ ಹೆಚ್ಚು ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ವೇತನವನ್ನು 8,400 ರೂ.ಗಳಿಂದ 16,590 ರೂ.ಗಳಿಗೆ ಹೆಚ್ಚಿಸಬೇಕು ಎಂದು 350 ಕಿ.ಮೀ.ಗಳ ಕಾಲ್ನಡಿಗೆ ಜಾಥಾ ಕೈಗೊಂಡಿದ್ದರು. 20-25 ವರ್ಷಗಳಿಂದ ದಿನಗೂಲಿ ನೌಕರರಾಗಿ ಸುಮಾರು 6.06 ಲಕ್ಷ ಎಕರೆ ಭೂಮಿಗೆ ನೀರುಣಿಸುವ ಕೆಲಸವನ್ನು ಮಾಡುತ್ತಿದ್ದು, ಇದರಲ್ಲಿ ಶೇ.25 ರಷ್ಟು ನೌಕರರು ಸಾವನ್ನಪ್ಪಿದ್ದಾರೆ. ವೇತನ ಹೆಚ್ಚಳ, ಸೇವಾ ಭದ್ರತೆಗಾಗಿ ಹಲವಾರು ಬಾರಿ ಮುಖ್ಯಮಂತ್ರಿ, ನೀರಾವರಿ ಮಂತ್ರಿ ಹಾಗೂ ಕಾರ್ಮಿಕ ಮಂತ್ರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಾರ್ಚ್ 17 ರಿಂದ ಮುನಿರಾಬಾದ್ ನಿಂದ ಬೆಂಗಳೂರು ಚಲೋ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಎ.14ರಂದು ಬೆಂಗಳೂರು ಸೇರಿದಂತೆ ಫ್ರೀಡಂ ಪಾರ್ಕ್ ನಲ್ಲಿ ಅಂಬೇಡ್ಕರ್ ಜನ್ಮದಿನದಿಂದು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಮಿಕರು ಬುಧವಾರ ತುಮಕೂರು ನಗರ ಪ್ರವೇಶಿಸುವ ಉತ್ಸಾಹದಲ್ಲಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಏಕಾಏಕಿ ಕಾರ್ಮಿಕರು ಬೀಡುಬಿಟ್ಟಿದ್ದ ಕೋರ ಸಮೀಪದ ತೋಟವೊಂದಕ್ಕೆ ತುಮಕೂರು ನಗರ ಡಿವೈಎಸ್ಪಿ ನಾಗರಾಜ್ ನೇತೃತ್ವದ ಪೊಲೀಸರ ತಂಡ ಆಗಮಿಸಿದ್ದು, ಜಾಥಾದ ನೇತೃತ್ವ ವಹಿಸಿದ್ದ ಕೆಲವರನ್ನು ಬಂಧಿಸಿದ್ದಲ್ಲದೆ, ಬಲವಂತವಾಗಿ ಪ್ರತಿಭಟನ ನಿರತರನ್ನು ಹಿಂದಕ್ಕೆ ಕಳುಹಿಸಿತು ಎಂದು ಹೋರಾಟಗಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News