×
Ad

ಶಿವಮೊಗ್ಗ: ತೀವ್ರಗೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆ

Update: 2017-04-13 18:28 IST

ಶಿವಮೊಗ್ಗ, ಎ.13: ಒಂದೆಡೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಬೇಗೆ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ಕೂಡ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಸಮಸ್ಯೆ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಹಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಜಲಮೂಲಗಳು ಬರಿದಾಗಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಮೇ ತಿಂಗಳಲ್ಲಿ ಜಿಲ್ಲೆಯ ಮಲೆನಾಡಿನ ಪ್ರದೇಶಗಳಲ್ಲಿಯೂ ಕುಡಿಯುವ ನೀರಿಗೆ ತೀವ್ರ ಸ್ವರೂಪದ ತತ್ವಾರ ತಲೆದೋರುವುದು ನಿಶ್ಚಿತವಾಗಿದೆ.

ಕುಡಿಯುವ ನೀರು ಸಮಸ್ಯೆ ತಲೆದೋರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗೆಯೇ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇದರ ಜೊತೆಗೆ ಹೊಸದಾಗಿ ಬೋರ್‌ವೆಲ್ ಕೊರೆಸುವ ಕೆಲಸವನ್ನು ಕೂಡ ಅಧಿಕಾರಿಗಳು ಬಿರುಸಿನಿಂದ ನಡೆಸುತ್ತಿದ್ದಾರೆ. 

’ಇಲ್ಲಿಯವರೆಗೂ ಇಲಾಖೆಯ ವತಿಯಿಂದ ಜಿಲ್ಲೆಯ ವಿವಿಧೆಡೆ ಸುಮಾರು 250 ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ. ಹಾಗೆಯೇ 550 ಕ್ಕೂ ಅಧಿಕ ಹೊಸ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಸಮರೋಪಾದಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಹಗಲಿರುಳು ಕೆಲಸ ನಡೆಸುತ್ತಿದ್ದೇವೆ. ನಾಗರಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್‌ ಹೇಳಿದ್ದಾರೆ.

"ಶಿವಮೊಗ್ಗ ತಾಲೂಕಿನ ಮುದ್ದಿನಕೊಪ್ಪ, ತ್ಯಾವರೆಕೊಪ್ಪ, ಉಂಬ್ಳೆಬೈಲು, ಶೆಟ್ಟಿಹಳ್ಳಿ ಹೊಸೂರು, ಗೆಜ್ಜೇನಹಳ್ಳಿ, ಲಿಂಗಾಪುರ ಮೊದಲಾದ ಗ್ರಾಮಗಳಲ್ಲಿ ತೀವ್ರ ಸ್ವರೂಪದ ಕುಡಿಯುವ ನೀರಿನ ಸಮಸ್ಯೆಯಿತ್ತು. ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಜೊತೆಗೆ ಹಲವೆಡೆ ಸಮಸ್ಯೆ ಪರಿಹರಿಸಲಾಗಿದೆ. ಉಳಿದಂತೆ ಶಿಕಾರಿಪುರ ತಾಲೂಕಿನ ಗೊಲ್ಲರಹಟ್ಟಿ ತಾಂಡಾ, ಈಸೂರು, ಸೊರಬದ ಹಿರೇಚೌಟಿ ಮೊದಲಾದ ಗ್ರಾಮಗಳಲ್ಲಿಯೂ ತೀವ್ರ ಸಮಸ್ಯೆ ಕಂಡುಬಂದಿದ್ದು ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಸ್ಥಳೀಯ ಗ್ರಾಪಂ ಆಡಳಿತ ಕೂಡ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

’ತಾಪಮಾನದ ಪ್ರಮಾಣ ಹೆಚ್ಚುತ್ತಿರುವುದರಿಂದ ಅಂತರ್ಜಲದ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಬೋರ್‌ವೆಲ್, ಬಾವಿಗಳು ನೀರಿಲ್ಲದೆ ಬರಿದಾಗುತ್ತಿವೆ. ಅಕಾಲಿಕ ಮಳೆಯಾದರೆ ಪರಿಸ್ಥಿತಿ ಸುಧಾರಣೆಗೆ ಬರಲಿದೆ. ಇಲ್ಲದಿದ್ದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ’ ಎಂದು ಎಸ್.ಎಂ.ಹರೀಶ್‌ ಹೇಳುತ್ತಾರೆ.

ಒಣಗುತ್ತಿರುವ ತೋಟ, ಗದ್ದೆಗಳು...
ಕೆರೆಕಟ್ಟೆ, ನದಿತೊರೆ, ಬೋರ್‌ವೆಲ್, ಬಾವಿಗಳು ನೀರಿಲ್ಲದೆ ಬರಿದಾಗುತ್ತಿರುವ ಪರಿಣಾಮದಿಂದ ಕಷ್ಟಪಟ್ಟು ಬೆಳೆದ ಬೆಳೆ ಸಂರಕ್ಷಣೆ ಮಾಡಿಕೊಳ್ಳಲು ರೈತ ಸಮುದಾಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಿರು ಬಿಸಿಲಿಗೆ ತೋಟ, ಗದ್ದೆಗಳಲ್ಲಿ ಬೆಳೆದು ನಿಂತ ಬೆಳೆಗಳು ಒಣಗಲಾರಂಭಿಸಿವೆ. ಇದರಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುವಿಸುವಂತಾಗಿದೆ. 

250 ಟ್ಯಾಂಕರ್ ನೀರು ಪೂರೈಕೆ

ಕುಡಿಯುವ ನೀರು ಸಮಸ್ಯೆ ತಲೆದೋರುವ ಗ್ರಾಮಗಳಿಗೆ ತಾತ್ಕಾಲಿಕ ವ್ಯವಸ್ಥೆಯಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಜಿಲ್ಲೆಯ ವಿವಿಧೆಡೆ ಇಲಾಖೆಯ ಮೂಲಕ ಸುಮಾರು 250 ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ. ಹಾಗೆಯೇ ಸ್ಥಳೀಯ ಗ್ರಾಪಂ ಆಡಳಿತಗಳು ಕೂಡ ಟ್ಯಾಂಕರ್ ಮೂಲಕ ನೀರು ಪೂರೈಸಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News