ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ; ಬಹುಜನ ವಿದ್ಯಾರ್ಥಿ ಸಂಘ
Update: 2017-04-13 20:25 IST
ಮಡಿಕೇರಿ,ಎ.13: ಮನುವಾದಿಗಳ ವ್ಯವಸ್ಥಿತ ಪಿತೂರಿ ಹಾಗೂ ದಲಿತರ ದಡ್ಡತನದಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರಾಗಿ ಬಿಂಬಿಸಲ್ಪಡುತ್ತಿದ್ದಾರೆ ಎಂದು ಆರೋಪಿಸಿರುವ ಬಹುಜನ ವಿದ್ಯಾರ್ಥಿ ಸಂಘ, ಈ ಬಾರಿಯ ಡಾ.ಅಂಬೇಡ್ಕರ್ ಜಯಂತಿಯನ್ನು ಪ್ರತಿಯೊಬ್ಬರು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕರೆ ನೀಡಿದೆ ಎಂದು ಸಿ.ಜೆ ಮೋಹನ್ ಮೌರ್ಯ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಪೀಳಿಗೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂದೇಶವನ್ನು ಸಾರುವ ಆಚರಣೆಗಳು ಸದಾ ನಡೆಯುತ್ತಿರಬೇಕು.ಮನುವಾದಿಗಲಿಂದ ದೇಶದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರ ಕಲುಷಿತವಾಗಿರುವುದರಿಂದ ಬಾಬಾ ಸಾಹೇಬರ ಜನ್ಮದಿನಾಚರಣೆಯನ್ನು ಬಹಳ ಜಾಗೃತಿ ವಹಿಸಿ ಆಚರಿಸಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರಸನ್ನ, ಸೋಮವಾರಪೇಟೆ ತಾಲೂಕು ಸಂಯೋಜಕ ಶರತ್,ಕುಶಾಲನಗರದ ವಿದ್ಯಾರ್ಥಿ ಮುಖಂಡ ತೇಜಸ್ ಉಪಸ್ಥಿತರಿದ್ದರು.