120 ದಶಲಕ್ಷ ಲೀಟರ್ ನೀರು ಪೂರೈಕೆ ಸಾಮರ್ಥ್ಯದ ಪೈಪ್‌ಲೈನ್ ಕಾಮಗಾರಿ ಪೂರ್ಣ
ಶಿವಮೊಗ್ಗ, ಎ.13: ತಾಲೂಕಿನ ಗಾಜನೂರಿನ ತುಂಗಾ ಜಲಾಶಯದಿಂದ ನಗರದ ಕೆ.ಆರ್. ವಾಟರ್‌ವರ್ಕ್ಸ್‌ಗೆ 120 ದಶಲಕ್ಷ ಲೀಟರ್ ನೀರು ಪೂರೈಕೆ ಮಾಡುವ ಹೊಸ ಪೈಪ್‌ಲೈನ್ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಂಡಿದೆ. ಗುರುವಾರ ಕೆ.ಆರ್.ವಾಟರ್‌ವರ್ಕ್ಸ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಹೊಸ ಪೈಪ್‌ಲೈನ್‌ನಲ್ಲಿ ನೀರು ಪೂರೈಕೆಗೆ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಚಾಲನೆ ನೀಡಿದರು.
ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ನೂತನ ಪೈಪ್‌ಲೈನ್ ಅಳವಡಿಕೆಯಿಂದ ನೀರು ಸರಬರಾಜು ಸೋರಿಕೆಗೆ ಕಡಿವಾಣ ಬೀಳಲಿದೆ. ದಿನದ 24 ಗಂಟೆ ನೀರು ಪೂರೈಸಲು ಸಾಧ್ಯವಾಗಲಿದೆ. ಈವರೆಗೆ ಗಾಜನೂರಿನಿಂದ ನೀರು ಪೂರೈಸುವ ಪೈಪ್‌ಲೈನ್ ಆರ್‌ಸಿಸಿಯದ್ದಾಗಿತ್ತು. ಇದು ಹಲವೆಡೆ ಒಡೆದುಹೋಗುವುದು, ಸೋರುವುದು ಮೊದಲಾದ ಸಮಸ್ಯೆಗೆ ಸಿಲುಕಿತ್ತು. ಶೇ.30ರಷ್ಟು ನೀರು ಸೋರುತ್ತಿತ್ತು. ಇದನ್ನು ತಪ್ಪಿಸಲು ಹೊಸ ಪೈಪ್‌ಲೈನ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಗಾಜನೂರಿನಿಂದ ವಾಟರ್ ವರ್ಕ್ಸ್‌ವರೆಗೆ 11.3 ಕಿ. ಮೀ. ಉದ್ದದ ಈ ಪೈಪ್‌ಲೈನನ್ನು ತುಂಗಾನದಿ ದಡದ ಮೂಲಕ ತರಲಾಗಿದೆ. ಈ ಹಿಂದಿನ ಪೈಪ್‌ಲೈನ್ ತೀರ್ಥಹಳ್ಳಿ ರಸ್ತೆಯಂಚಿನಲ್ಲಿತ್ತು. ಇದು ಹಲವು ಸಮಸ್ಯೆಗಳಿಗೂ ಕಾರಣವಾಗಿತ್ತು. ಈಗ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗುತ್ತಿರುವುದರಿಂದ ಇದರ ತೆರವಿಗೆ ಇಲಾಖೆ ಮನವಿ ಮಾಡಿತ್ತು. ಸದ್ಯದ ಪದ್ದತಿಯಲ್ಲಿ 80 ದಶಲಕ್ಷ ಲೀಟರ್ ನೀರನ್ನು ತರಲಾಗುತ್ತಿದೆ. ಕರ್ನಾಟಕ ನೀರು ಸರಬರಾಜು ಮಂಡಳಿಗೆ 5 ವರ್ಷದ ಮಟ್ಟಿಗೆ ಈ ಯೋಜನೆಯನ್ನು ನೀಡಲಾಗಿದ್ದು, 5 ವರ್ಷದ ನಂತರ ಪಾಲಿಕೆಗೆ ಹಸ್ತಾಂತರಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.