×
Ad

ದಾವಣಗೆರೆ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಅನಿತಾ ಬಾಯಿ ಆಯ್ಕೆ

Update: 2017-04-13 23:43 IST

ದಾವಣಗೆರೆ, ಎ.13: ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಇಲ್ಲಿನ 11ನೇ ವಾರ್ಡ್‌ನ ಅನಿತಾ ಬಾಯಿ ಹಾಗೂ ಉಪಮೇಯರ್ ಆಗಿ 16ನೇ ವಾರ್ಡಿನ ಮಂಜುಳಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತದ ನಾಲ್ಕನೇ ಅವಧಿಗೆ ಈ ಇಬ್ಬರು ಆಯ್ಕೆಯಾದರು. ಮೇಯರ್ ಸ್ಥಾನವು ಬಿಸಿಎಂ ಬಿ ಮಹಿಳೆಗೆ ಮೀಸಲಾಗಿತ್ತು. ಹೀಗಾಗಿ, ಜಿಲ್ಲಾ ಹೈಕಮಾಂಡ್ ಸೂಚನೆ ಮೇರೆಗೆ ಅನಿತಾಬಾಯಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಅಂಗೀಕೃತವಾದ ಬಳಿಕ ವಾಪಸ್‌ಗೆ 10 ನಿಮಿಷ ಕಾಲಾವಕಾಶ ನೀಡಲಾಯಿತು. ನಾಮಪತ್ರ ವಾಪಸ್ ಪಡೆಯದ ಕಾರಣ ಚುನಾವಣಾಧಿಕಾರಿಯಾದ ಜಯಂತಿ ಅವರು ಅನಿತಾಬಾಯಿ ಆಯ್ಕೆ ಘೋಷಿಸಿದರು.

ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿದ್ದ ಉಪಮೇಯರ್ ಸ್ಥಾನಕ್ಕೆ 16ನೇ ವಾರ್ಡಿನ ಸದಸ್ಯೆ ಮಂಜುಳಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ನಂತರ ಯಾವ ಸದಸ್ಯರು ನಾಮಪತ್ರ ಸಲ್ಲಿಸದಿರುವುದರಿಂದ ಮಂಜುಳಮ್ಮ ಉಪಮೇಯರ್ ಆಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದರು.

ಒಟ್ಟು 41 ಪಾಲಿಕೆ ಸದಸ್ಯರಲ್ಲಿ ಕಾಂಗ್ರೆಸ್‌ನ 39 ಪಾಲಿಕೆ ಸದಸ್ಯರ ಬಹುಮತ ಹೊಂದಿರುವುದರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಇಬ್ಬರು ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದ ಕಾರಣ ಯಾವುದೇ ಪೈಪೋಟಿ ಇರಲಿಲ್ಲ. ಒಂದು ವರ್ಷದ ಅವಧಿಗೆ ಮೇಯರ್, ಉಪ ಮೇಯರ್ ಆಯ್ಕೆ ನಡೆದಿದ್ದು, 2017ರ ಎ.13ರಿಂದ 2018ರ ಎ.12ರ ಇವರ ಅಧಿಕಾರ ಅವಧಿಯಾಗಿದೆ.

ಇದೇ ಸಂದರ್ಭ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಲ್ಲಿಯೂ ಆಡಳಿತ ಪಕ್ಷದಲ್ಲಿ ಯಾವುದೇ ಸ್ಪರ್ಧೆ ಇರಲಿಲ್ಲ. ಹೈಕಮಾಂಡ್ ಮೊದಲೇ ಸದಸ್ಯರ ಆಯ್ಕೆ ಅಂತಿಮಪಡಿಸಿದ್ದ ಕಾರಣ ಸಮಿತಿಯಲ್ಲಿ ಅವಕಾಶವಿದ್ದ ಏಳು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ತೆರಿಗೆ ನಿರ್ಧರಣೆ ಮತ್ತು ಹಣಕಾಸು ಸಮಿತಿಗೆ ಸುರೇಂದ್ರ ಮೊಯ್ಲಿ, ಎಸ್. ಬಸಪ್ಪ, ಅನ್ನಪೂರ್ಣ ಬಸವರಾಜ್, ರೇಣುಕಮ್ಮ ಶಾಂತರಾಜ್, ಎಚ್.ಬಿ. ಗೋಣೆಪ್ಪ, ಜೆ.ಎನ್. ಶ್ರೀನಿವಾಸ್, ಅಬ್ದುಲ್ ರಹೀಂ ಸಾಬ್ ಆಯ್ಕೆಯಾದರು.

ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಗೆ ಆರ್. ಶ್ರೀನಿವಾಸ, ಎಚ್. ತಿಪ್ಪಣ್ಣ, ಕೆ. ಚಮನ್ ಸಾಬ್, ಅಲ್ತಾಫ್ ಹುಸೈನ್, ದಿನೇಶ ಶೆಟ್ಟಿ, ಎಂ. ಹಾಲೇಶ, ಲಕ್ಷ್ಮೀದೇವಿ ವೀರಣ್ಣ ಆಯ್ಕೆಯಾಗಿದ್ದು, ನಗರ ಯೋಜನೆ ಮತ್ತು ಸುಧಾರಣೆ ಸಮಿತಿಗೆ ಅಶ್ವಿನಿ ಪ್ರಶಾಂತ್, ರಮೇಶ ಶಿವನಹಳ್ಳಿ, ಪಿ.ಎನ್. ಚಂದ್ರಶೇಖರ್, ಲಲಿತಾ ರಮೇಶ್, ಬಸವರಾಜ ಶಿವಗಂಗಾ, ಲಿಂಗರಾಜ, ರೇಖಾ ನಾಗರಾಜ್ ಹಾಗೂ ಲೆಕ್ಕಪತ್ರ ಸಮಿತಿಗೆ ರೇಣುಕಾಬಾಯಿ ವೆಂಕಟೇಶನಾಯ್ಕ, ಗೌಡ್ರು ರಾಜಶೇಖರ್, ಶೋಬಾ ಪಲ್ಲಾಗಟ್ಟೆ, ಅಬ್ದುಲ್ ಲತೀಫ್, ದಿಲ್‌ಶಾದ್, ಬಿ. ಪರಸಪ್ಪ, ಆಶಾ ಉಮೇಶ್ ರನ್ನುಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News