ಬಾಂಬ್ ನಾಗನ ಮನೆ, ಕಚೇರಿ ಮೇಲೆ ಪೊಲೀಸರ ದಾಳಿ
ಬೆಂಗಳೂರು, ಎ.14: ಶ್ರೀರಾಂಪುರದ ಮಾಜಿ ಕಾರ್ಪೋರೇಟರ್ ,ರೌಡಿ ಬಾಂಬ್ ನಾಗನ ಕಚೇರಿ ಮತ್ತು ಮನೆಯ ಮೇಲೆ ಪೊಲೀಸರು ಇಂದು ಬೆಳಗ್ಗಿನ ಜಾವ ದಾಳಿ ನಡೆಸಿ 100 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಿಷೇಧಿತ ಹಳೆನೋಟುಗಳನ್ನು ಶಪಡಿಸಿಕೊಂಡಿದ್ದಾರೆ.
ಶ್ರೀರಾಂಪುರದಲ್ಲಿರುವ ನಾಗರಾಜ ಅಲಿಯಾಸ್ ಬಾಂಬ್ ನಾಗನ ಕಚೇರಿ ಮತ್ತು ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಆತನ ಕಚೇರಿಯಲ್ಲಿ ಹಳೆಯ 1000ಮತ್ತು 500 ರೂ. ಮುಖಬೆಲೆಯ ನಿಷೇಧಿತ ಹಳೆಯ ನೋಟುಗಳಿರುವ ಹಣದ ಬ್ಯಾಗ್‌ಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಇದೇ ವೇಳೆ ಮನೆಯಲ್ಲಿ ಪೊಲೀಸರು ಶೋಧ ನಡೆಸಿದಾಗ ಪೆಟ್ಟಿಗೆಯೊಂದರಲ್ಲಿ ಅಡಗಿಸಿಡಲಾದ 100 ರೂ.ಮುಖಬೆಲೆಯ ಕೋಟ್ಯಂತರ ರೂಪಾಯಿ ಮೊತ್ತದ ಹಣ ದೊರೆತಿದೆ .
ಸಾಕಷ್ಟು ಸಿದ್ದತೆಯೊಂದಿಗೆ ಆಗಮಿಸಿರುವ ಪೊಲೀಸರು ಬಾಂಬ್ ನಾಗನ ಕಚೇರಿಯ ಬೀಗ ಮುರಿದು ಒಳ ಪ್ರವೇಶಿಸಿ ಶೋಧ ನಡೆಸಿದ ಬಳಿಕ ಮನೆಯ ಮೇಲೆ ದಾಳಿ ಮುಂದುವರಿಸಿದ್ದಾರೆ.ಮನೆಯಲ್ಲಿ ಅಡಗಿಕೊಂಡಿರುವ ಬಾಂಬ್ ನಾಗನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯಮಿಯೊಬ್ಬರನ್ನು ಅಪಹರಿಸಿ ಅವರಿಂದ 50 ಲಕ್ಷ ರೂ. ಹಣ ಪಡೆದ ಆರೋಪದಲ್ಲಿ ಬಾಂಬ್ ನಾಗನ ಕಚೇರಿ ಮತ್ತು ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.