ಲಿಂಗನಮಕ್ಕಿ ಡ್ಯಾಂನಲ್ಲಿ ಕಡಿಮೆಯಾಗುತ್ತಿರುವ ನೀರಿನ ಮಟ್ಟ: ವಿದ್ಯುತ್ ಉತ್ಪಾದನೆ ಸ್ಥಗಿತ ಸಾಧ್ಯತೆ?
ಶಿವಮೊಗ್ಗ, ಎ.14: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ, ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಶೇ. 30ರಷ್ಟು ವಿದ್ಯುತ್ ಪೂರೈಕೆ ಮಾಡುವ ಹಾಗೂ ಏಷ್ಯಾ ಖಂಡದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುವ ಹೆಗ್ಗಳಿಕೆಗೆ ಪಾತ್ರವಾದ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಜಲಾಶಯದ ಪ್ರಮುಖ ವಿದ್ಯುದಾಗರಗಳಲ್ಲಿ ನೀರಿನ ಕೊರತೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತದ ಭೀತಿ ಎದುರಾಗಿದೆ!
ಈ ವರ್ಷ ದುರ್ಬಲ ಮುಂಗಾರು ಮಳೆಯ ಕಾರಣದಿಂದ ಲಿಂಗನಮಕ್ಕಿ ಡ್ಯಾಂ ಗರಿಷ್ಠ ಮಟ್ಟ ತಲುಪಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದೀಗ ಇದರ ನೇರ ಪರಿಣಾಮ ವಿದ್ಯುತ್ ಉತ್ಪಾದನೆಯ ಮೇಲೆ ಬೀರಿದೆ. ಮುಂದಿನ ಕೆಲ ದಿನಗಳಲ್ಲಿ ಜಲಾನಯನ ವ್ಯಾಪ್ತಿಯಲ್ಲಿ ಮಳೆಯಾಗಿ, ಡ್ಯಾಂಗೆ ನೀರು ಹರಿದು ಬರದಿದ್ದರೆ ನೀರಿನ ಕೊರತೆಯ ಕಾರಣದಿಂದ ಡ್ಯಾಂ ವ್ಯಾಪ್ತಿಯ ಪ್ರಮುಖ ವಿದ್ಯುದಾಗಾರಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸುವುದು ಅನಿವಾರ್ಯವೆಂಬಂತಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ದ ಮೂಲಗಳು ಮಾಹಿತಿ ನೀಡುತ್ತವೆ.
"ಲಿಂಗನಮಕ್ಕಿ ಡ್ಯಾಂನಲ್ಲಿ 1,757 (ಗರಿಷ್ಠ ಮಟ್ಟ : 1819) ಅಡಿ ನೀರು ಸಂಗ್ರಹವಾಗಿದೆ. ಲಿಂಗನಮಕ್ಕಿ ಪವರ್ ಹೌಸ್‌ನಲ್ಲಿ 1,743 ಅಡಿಯವರೆಗೆ ಮಾತ್ರ ವಿದ್ಯುತ್ ಉತ್ಪಾದಿಸಬಹುದಾಗಿದೆ. ಏಪ್ರಿಲ್ ತಿಂಗಳಲ್ಲಿ ಮಳೆಯಾಗಿ ಡ್ಯಾಂಗೆ ನೀರು ಹರಿದು ಬಂದರೆ ನಿಯಮಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಬಹುದು. ಇಲ್ಲದಿದ್ದರೆ ಮೇ ತಿಂಗಳಿನಿಂದ ಉತ್ಪಾದನೆ ನಿಲ್ಲಿಸುವುದು ಅನಿವಾರ್ಯವಾಗಲಿದೆ’ ಎಂದು ಕೆಪಿಸಿಯ ಮೂಲಗಳು ತಿಳಿಸುತ್ತವೆ.
ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಿರುವುದನ್ನರಿತ ಇಂಧನ ಇಲಾಖೆಯು, ಲಿಂಗನಮಕ್ಕಿ ವಿದ್ಯುದಾಗರಗಳು ಸೇರಿದಂತೆ ರಾಜ್ಯದ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಉತ್ಪಾದಿಸುವ ವಿದ್ಯುತ್‌ನ ಪ್ರಮಾಣವನ್ನು ಕಡಿಮೆ ಮಾಡಿದೆ. ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.
"ಕಡಿಮೆ ನೀರಿನ ಸಂಗ್ರಹದ ನಡುವೆಯು, ಲಿಂಗನಮಕ್ಕಿಯ ಮಹಾತ್ಮ ಗಾಂಧಿ ವಿದ್ಯುದಾಗರದಲ್ಲಿ ಪ್ರಸ್ತುತ ಪ್ರತಿದಿನ 12 ರಿಂದ 15 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಸರಾಸರಿ 10 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ಸುಮಾರು 8,000 ಸಾವಿರ ಕ್ಯೂಸೆಕ್ ನೀರಿನ ಅವಶ್ಯಕತೆಯಿದೆ’ ಎಂದು ಕೆಪಿಸಿ ಮೂಲಗಳು ಮಾಹಿತಿ ನೀಡಿವೆ.
"ರಾಜ್ಯದಲ್ಲಾಗುವ ವಿದ್ಯುತ್ ಉತ್ಪಾದನೆಯಲ್ಲಿ, ಮಹಾತ್ಮ ಗಾಂಧಿ ವಿದ್ಯುದಾಗರದ ಕೊಡುಗೆ ಅಪಾರವಾದು. ಇಲ್ಲಿರುವ 10 ಯೂನಿಟ್‌ಗಳಿಂದ ಪ್ರತಿದಿನ 24 ಮಿಲಿಯನ್ ಯೂನಿಟ್ ಉತ್ಪಾದನೆ ಮಾಡಬಹುದಾಗಿದೆ. ಆದರೆ ಡ್ಯಾಂನಲ್ಲಿ ನೀರಿನ ಕೊರತೆಯಿಂದ ಈ ಬೇಸಿಗೆಯಲ್ಲಿ ಸರಿಸುಮಾರು 15 ಮಿಲಿಯನ್ ಯೂನಿಟ್‌ಗೆ ಇಳಿಕೆ ಮಾಡಲಾಗಿದೆ’ ಎಂದು ಕೆಪಿಸಿ ಇಂಜಿನಿಯರ್ ಮಾಹಿತಿ ನೀಡುತ್ತಾರೆ.
18 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ದುರಸ್ತಿ ಕಾರ್ಯ
ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ದುರಸ್ತಿ ಕಾರ್ಯವನ್ನು ಕೆಪಿಸಿ ಕೈಗೆತ್ತಿಕೊಂಡಿದ್ದು, ರಿಪೇರಿ ಕಾರ್ಯ ಭರದಿಂದ ಸಾಗಿದೆ. ಡ್ಯಾಂನಲ್ಲಾಗುತ್ತಿದ್ದ ಸೋರಿಕೆಯಿಂದ ಪ್ರತಿದಿನ ಸರಿಸುಮಾರು 20 ಕ್ಯೂಸೆಕ್‌ನಷ್ಟು ನೀರು ವ್ಯರ್ಥವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಿರುವುದರಿಂದ ದುರಸ್ತಿ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿದಿದೆ.
ದಿನದಿಂದ ದಿನಕ್ಕೆ ಏರುತ್ತಿದೆ ವಿದ್ಯುತ್ ಬೇಡಿಕೆ!
ದಿನದಿಂದ ದಿನಕ್ಕೆ ರಾಜ್ಯದ ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚಳವಾಗುತ್ತಿದೆ. ಮುಂಗಾರು ಮಳೆ ಕೊರತೆಯಿಂದ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿಲ್ಲ. ಇದರಿಂದ ಉಷ್ಣ ಸ್ಥಾವರಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. "ರಾಜ್ಯಾದ್ಯಂತ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದರಿಂದ ವಿದ್ಯುತ್ ಬಳಕೆಯ ಪ್ರಮಾಣ ಕೂಡ ಏರುಗತಿಯಲ್ಲಿ ಸಾಗುತ್ತಿದೆ. ಬೇಡಿಕೆ - ಪೂರೈಕೆಯ ನಡುವೆ ಅಂತರ ಹೆಚ್ಚುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಲೋಡ್‌ಶೆಡ್ಡಿಂಗ್ ಅನಿವಾರ್ಯವಾಗಬಹುದು’ ಎಂದು ಇಂಧನ ಇಲಾಖೆಯ ಮೂಲಗಳು ಹೇಳುತ್ತವೆ.
1900 ಚದರ ಕಿ.ಮೀ. ಜಲಾನಯನ ಪ್ರದೇಶ: ಶರಾವತಿ ನದಿಗೆ ಅಡ್ಡಲಾಗಿ 1964 ರಲ್ಲಿ ನಿರ್ಮಿಸಲಾದ ಲಿಂಗನಮಕ್ಕಿ ಡ್ಯಾಂ 2.4 ಕಿ.ಮೀ. ಉದ್ದವಿದೆ. 150 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 1900 ಚದರ ಕಿ.ಮೀ.ನಷ್ಟು ವಿಶಾಲವಾದ ಜಲಾನಯನ ಪ್ರದೇಶವನ್ನು ಹೊಂದಿದೆ. ಪ್ರಮುಖವಾಗಿ ಹೊಸನಗರ, ಸಾಗರ ತಾಲೂಕಿನ ಭಾಗಗಳನ್ನು ಒಳಗೊಂಡಿದೆ. ಜಲಾನಯನ ಪ್ರದೇಶದಲ್ಲಾಗುತ್ತಿರುವ ಮಳೆ ಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಡ್ಯಾಂ ಗರಿಷ್ಠ ಮಟ್ಟ ತಲುಪುತ್ತಿಲ್ಲ.