×
Ad

ಬಾಲಕಿಯ ಅತ್ಯಾಚಾರ ಪ್ರಕರಣ: ಓರ್ವ ಮಹಿಳೆ ಸೇರಿ ಮೂವರಿಗೆ ಶಿಕ್ಷೆ, ದಂಡ

Update: 2017-04-14 19:18 IST

ಬೀದರ್, ಎ.14: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ, ಪ್ರಮುಖ ಆಪಾದಿತ ಸೇರಿ ಮೂವರಿಗೆ ಇಲ್ಲಿಯ ಪೊಕ್ಸೊ ಸ್ಪೆಷಲ್ ಕೋರ್ಟ್‌ನ ನ್ಯಾಯಾಧೀಶ ಜಿ.ನಂಜುಂಡಯ್ಯ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಮುಖ ಆರೋಪಿ ಬೀದರ್ ತಾಲೂಕಿನ ಹಳ್ಳದಕೇರಿಯ ಜೀವನ್(26), ನಿಜಾಂಪೂರ್ ಗ್ರಾಮದ ರಾಣಿ ಮತ್ತು ಕೊಳಾರ್-ಕೆ ಗ್ರಾಮದ ಆಗಸ್ಟಿನ್ ನೇಳಗಿಗೆ ಪೊಕ್ಸೋ ಸ್ಪೆಷಲ್ ಕೋರ್ಟ್ ಶಿಕ್ಷೆ ಮತ್ತು ದಂಡ ವಿಧಿಸಿದೆ. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ವಿದ್ಯಾಧರ್ ಪ್ರಕರಣದಲ್ಲಿ ವಾದ ಮಂಡಿಸಿದರು.

ಪ್ರಕರಣವೇನು: ಕ್ಷುಲ್ಲಕ ಕಾರಣಕ್ಕಾಗಿ ಸಂತ್ರಸ್ತ ಬಾಲಕಿಯ ತಂದೆ ಮತ್ತು ರಾಣಿ ನಡುವೆ ವೈಮನಸ್ಸು ಉಂಟಾಗಿತ್ತು. ಸೇಡು ತೀರಿಸಿಕೊಳ್ಳುವ ಸಲುವಾಗಿ ರಾಣಿ ಜೀವನ್ ನ ಸಹಾಯ ಕೋರಿದ್ದಳು. ಬಾಲಕಿಯ ಜೊತೆ ಗೆಳೆತನ ಬೆಳೆಸಿದ ಜೀವನ್ ಮದುವೆಯಾಗುವುದಾಗಿ ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಬಾಲಕಿಯನ್ನು ಬೀದರ್‌ಗೆ ಕರೆ ತಂದು ರೂಮಿನಲ್ಲಿರಿಸಿ ಮತ್ತೊಮ್ಮೆ ಅತ್ಯಾಚಾರವೆಸಗಿದ್ದಲ್ಲದೆ, ಮದುವೆಯಾಗಲು ಹಣದ ಹೊಂದಾಣಿಕೆಯಾಗುವವರೆಗೂ ಹೈದರಾಬಾದ್‌ನಲ್ಲಿರುವ ಸ್ನೇಹಿತನ ಮನೆಯಲ್ಲಿರುವಂತೆ ಆಕೆಯ ಮನವೊಲಿಸಿದ್ದ ಎನ್ನಲಾಗಿದೆ. 

ಪ್ರಕರಣದ ಕುರಿತು ತೀರ್ಪು ನೀಡಿದ ಪೊಕ್ಸೊ ಸ್ಪೆಷಲ್ ಕೋರ್ಟ್‌ ಅಪರಾಧಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ನೀಡಿದೆ.

ಪರಿಹಾರಕ್ಕೆ ಕ್ರಮ: ಪ್ರಕರಣದಲ್ಲಿ ನೊಂದ ಬಾಲಕಿಗೆ ಪರಿಹಾರ ದೊರೆಯುವುದರ ಖಾತರಿಗಾಗಿ ಪ್ರಕರಣದ ತೀರ್ಪಿನ ಪ್ರತಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶನ ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಿದರು.  

          

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News