ನೂತನ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಗ್ರಾಪಂಗಳಿಂದ ಕಿರುಕುಳ: ಆರೋಪ
ಮೂಡಿಗೆರೆ, ಎ.14: ನೂತನ ಬಿಪಿಎಲ್ ಪಡಿತರ ಕಾರ್ಡ್ ಗಳಿಗೆ ಪ್ರತಿ ಗ್ರಾಪಂ ಕಚೇರಿಯಲ್ಲಿ ಎ.1ರಿಂದ ಅರ್ಹರಿಂದ ಅರ್ಜಿ ಸಲ್ಲಿಸಲು ಸರಕಾರ ಅನುಕೂಲ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಅರ್ಜಿ ಸಲ್ಲಿಕೆಗೆ ಬರುವ ಕುಟುಂಬಗಳಿಗೆ ಕೆಲವು ಗ್ರಾಪಂ ಪಿಡಿಒಗಳು ಮತ್ತು ಜನಪ್ರತಿನಿಧಿಗಳು ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದೆ.
ಗ್ರಾಪಂಗಳು ಮನಸೋ ಇಚ್ಚೆಯಂತೆ ನಿಯಮಗಳನ್ನು ರೂಪಿಸಿಕೊಂಡು ಅರ್ಜಿದಾರ ಬಡ ಕುಟುಂಬಗಳನ್ನು ಕಂಗಾಲಾಗಿಸುತ್ತಿವೆ. ಮೂಡಿಗೆರೆ ತಾಲೂಕಿನ ಕೆಲವು ಗ್ರಾಪಂ ಪಿಡಿಒಗಳು ಮತ್ತು ಜನಪ್ರತಿನಿಧಿಗಳು ಅರ್ಜಿದಾರರಿಂದ ಎಲೆಕ್ಷನ್ ಐಡೆಂಟಿಟಿ ಕಾರ್ಡ್, ಆಧಾರ್ ಕಾರ್ಡ್, ಕಂದಾಯದ ಹಣ ಪಾವತಿ ರಶೀದಿ, ಕರೆಂಟ್ ಬಿಲ್, ಕುಟುಂಬದ ವಾರ್ಷಿಕ ವರಮಾನದ ದೃಢೀಕರಣ ಸಹಿತ ವಿವಿಧ ದಾಖಲೆಗಳನ್ನು ಕೇಳುತ್ತಿದೆ. ಈ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಾದ ಅರ್ಜಿದಾರರಿಗೆ ಕೇವಲ ಒಂದು ದಿನದಲ್ಲಿ ಕೆಲಸ ಬಿಟ್ಟು ಗ್ರಾಪಂ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಅಧಿಕಾರಿಗಳು ನಿರ್ಮಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.