×
Ad

ಆರ್ಥಿಕ, ಸಾಮಾಜಿಕ, ರಾಜಕೀಯ ತಾರತಮ್ಯಗಳು ಅಳಿಯದೆ ಸಮಗ್ರ ಭಾರತ ನಿರ್ಮಾಣವಾಗದು: ಶ್ರೀವೀರಭದ್ರ ಚನ್ನಮಲ್ಲ ಸ್ವಾಮೀಜಿ

Update: 2017-04-14 22:45 IST

ತುಮಕೂರು, ಎ.14: ಎಲ್ಲಿಯವರೆಗೆ ಅಸ್ಪೃಶ್ಯತೆ ಹೆಸರಿನಲ್ಲಿ ಶೋಷಿತ ಸಮುದಾಯಗಳು ಅನುಭವಿಸುತ್ತಿರುವ ಆರ್ಥಿಕ, ಸಾಮಾಜಿಕ, ರಾಜಕೀಯ ತಾರತಮ್ಯಗಳು ನಿವಾರಣೆಯಾಗುವುದಿಲ್ಲವೋ ಅಲ್ಲಿಯವರೆಗೆ ಸಮಗ್ರ ಭಾರತ ಕಟ್ಟುವ ಕನಸು ನನಸಾಗದು ಎಂದು ನಿಡುಮಾಮಿಡಿ ಮಠದ ಶ್ರೀವೀರಭದ್ರ ಚನ್ನಮಲ್ಲಸ್ವಾಮೀಜಿ ತಿಳಿಸಿದ್ದಾರೆ.

ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಪೌರಕಾರ್ಮಿಕರ ಸಂಘಟನೆ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಅವರ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, "ಹಿಂದೂ ನಾವೆಲ್ಲಾ ಒಂದು-ನಾವೆಲ್ಲಾ ಬಂಧು" ಎಂಬ ಮಾತು ನಿಜವಾಗಬೇಕಾದರೆ ಮೊದಲು ಶೋಷಿತ ಸಮುದಾಯಗಳನ್ನು ನಿಕೃಷ್ಟವಾಗಿ ನೋಡುವುದನ್ನು ಬೀಡಬೇಕು. ದೇವಾಲಯ, ಗುಡಿ, ಗೋಪುರ, ಮಠಗಳಿಗೆ ಮುಕ್ತ ಪ್ರವೇಶ ನೀಡಬೇಕು. ಸಂಪ್ರದಾಯದ ಹೆಸರಿನಲ್ಲಿ ನಡೆಸುವ ಮಡೆಸ್ನಾನ, ಎಡೆಸ್ನಾನಗಳನ್ನು ಬಿಟ್ಟು, ಸಹಪಂಕ್ತಿ ಭೋಜನಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ಭಾರತ ಅನಾದಿ ಕಾಲದಿಂದಲೂ ಕೂಡಿ ಬದುಕು, ಹಂಚಿ ಉಣ್ಣು ಎಂಬ ತತ್ವದ ಮೇಲೆ ನಡೆದುಕೊಂಡು ಬಂದಿದೆ. ಆದರೆ ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಈ ತತ್ವಕ್ಕೆ ವಿರುದ್ಧವಾಗಿದ್ದು, ಇದು ಪ್ರಜಾಸತ್ತತೆಯ ಮೇಲೆ, ಜೊತೆಗೆ ಸಂವಿಧಾನದ ಆಶಯಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ದೇಶದ ಅಲ್ಪಸಂಖ್ಯಾತರು, ಶೋಷಿತ ಸಮುದಾಯಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದೆ. ಇದು ಭವಿಷ್ಯದ ಭಾರತಕ್ಕೆ ಶುಭ ಸೂಚಕವಲ್ಲ. ಇದರಿಂದ ಹೊರಬರುವ ನಿಟ್ಟಿನಲ್ಲಿ ಪ್ರಜ್ಞಾವಂತರೆನಿಸಿಕೊಂಡವರು ಅಲೋಚನೆ ನಡೆಸಬೇಕಾಗಿದೆ ಎಂದು ಸ್ವಾಮೀಜಿ ನುಡಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಹಿರಿಯ ಚಿಂತಕರಾದ ಕೆ.ದೊರೈರಾಜು, ಪ್ರೊ,ಜಿ.ಎಂ.ಶ್ರೀನಿವಾಸಯ್ಯ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್, ಪೌರಕಾರ್ಮಿಕ ಸಂಘದ ರಾಮಕೃಷ್ಣಯ್ಯ, ನಗರಪಾಲಿಕೆ ಉಪಮೇಯರ್ ಫರ್ಝಾನಾ ಖಾನಂ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಯೂಸುಫ್ ಖಾನ್, ಪಾಲಿಕೆ ಸದಸ್ಯ ನಯಾಝ್ ಅಹಮದ್, ಡಾ.ಅರುಂಧತಿ, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News