×
Ad

ಜಿಲ್ಲಾಡಳಿತದ ಆದೇಶಕ್ಕೂ ಕ್ಯಾರೇ ಎನ್ನದ ಅರಣ್ಯ ಇಲಾಖೆ: ಬೋರ್ ವೆಲ್ ಗಾಗಿ ಪಟ್ಟು ಹಿಡಿದ ಗ್ರಾಮಸ್ಥರು

Update: 2017-04-14 23:37 IST

ಭಟ್ಕಳ, ಎ.14: ತಾಲೂಕಿನ ಬೆಳಕೆ ಗ್ರಾಪಂ ವ್ಯಾಪ್ತಿಯ ಗೊರಟೆ ಕಿರುಹೊಳೆ ಮಹಾಸತಿ ದೇವಸ್ಥಾನದ ಬಳಿ ಕುಡಿಯುವ ನೀರಿಗಾಗಿ ಬೋರ್ ವೆಲ್ ಕೊರೆಯಲು ಜಿಲ್ಲಾಡಳಿತ ಆದೇಶ ನೀಡಿದರೂ ಕ್ಯಾರೇ ಎನ್ನದ ಭಟ್ಕಳ ಅರಣ್ಯ ಇಲಾಖೆಯು ಬೋರ್ ವೆಲ್  ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಅರಣ್ಯ ಇಲಾಖೆಯ ವರ್ತನೆಯನ್ನು ಖಂಡಿಸಿರುವ ಗ್ರಾಮಸ್ಥರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದು, ತಹಶೀಲ್ದಾರ್ ವಿ.ಎನ್.ಬಾಡ್ಕರ, ನೀರಾವರಿ ಇಲಾಖೆಯ ಇಂಜಿನಿಯರ್ ಫಯಾಝ್, ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದಾಗಿ ಪರಿಸ್ಥಿತಿ ತಿಳಿಗೊಂಡಿದೆ.

ತಹಶೀಲ್ದಾರ್ ಬಾಡ್ಕರ್ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ್ದು ಜಿಲ್ಲಾಧಿಕಾರಿ ಆದೇಶದಂತೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬೋರ್ ವೆಲ್ ಕೊರೆಯುವ ಕೆಲಸವನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ. ಭಟ್ಕಳ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು ತಾಲೂಕಾಡಳಿತ ಇದಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದೆ. ಕಳೆದರೆಡು ದಿನಗಳ ಹಿಂದೆ ಇಂತದ್ದೇ ಸಮಸ್ಯೆ ಹನೀಫಾಬಾದ್ ಪ್ರದೇಶದಲ್ಲಿ ಉಂಟಾದಾಗ ತಹಶೀಲ್ದಾರ್ ಮಧ್ಯಸ್ಥಿಕೆಯಿಂದಾಗಿ ಪರಿಹಾರಗೊಂಡಿದ್ದನ್ನು ಸ್ಮರಿಸಬಹುದಾಗಿದೆ.

ಘಟನೆಯ ವಿವರ: ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಕಿರುಹೊಳೆ ಶ್ರೀ ಮಹಾಸತಿ ದೇವಸ್ಥಾನದ ಬಳಿಯಲ್ಲಿ ಬೋರ್ ವೆಲ್ ಕೊರೆಯಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಅದರಂತೆ ಕಾಮಗಾರಿಯೂ ಪ್ರಾರಂಭವಾಗಿತ್ತು. ರಾತ್ರಿ 10:30ರ ಸುಮಾರಿಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು, ಇಲಾಖೆಯ ಜಾಗದಲ್ಲಿ ಬೋರ್ ವೆಲ್  ಕೊರೆಯಲು ಬಿಡುವುದಿಲ್ಲ ಎಂದು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ಇದು ದೇವಸ್ಥಾನಕ್ಕೆ ಸಂಬಂಧಿಸಿದ ಜಾಗ, ಅಲ್ಲದೆ ಸಾರ್ವಜನಿಕರಿಗೆ ಉಪಯೋಗವಾಗುವಂತೆ ನೀರಾವರಿ ಯೋಜನೆಯಡಿ ಬೋರ್‌ವೆಲ್ ತೆಗೆಯಲಾಗುತ್ತಿದೆ. ಇಲ್ಲಿ ಸುತ್ತಲೂ 200ಕ್ಕೂ ಅಧಿಕ ಮನೆಗಳಿವೆ. ಇದರಿಂದ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗುತ್ತದೆ ಯಾವ ಕಾರಣಕ್ಕೂ ಕಾಮಗಾರಿ ನಿಲ್ಲಿಸಲು ಬಿಡುವದಿಲ್ಲ ಎಂದು ಪ್ರತಿಭಟಿಸಿದ್ದಾರೆ. ಜಿಲ್ಲಾಧಿಕಾರಿಯ ಆದೇಶ ಪತ್ರವನ್ನು ಅರಣ್ಯ ಇಲಾಖೆಗೆ ತೋರಿಸಿದ್ದಾರೆ.

ಅತಿಕ್ರಮಣ ಜಾಗದಲ್ಲಿ ಮನೆ ತೆರವು ಮಾಡಲು ಬಾರದ ನೀವು ಸಾರ್ವಜನಿಕರಿಗೆ ಅತಿ ಅವಶ್ಯವಾದ ಜಿಲ್ಲಾಡಳಿತದ ಯೋಜನೆ ನಿಲ್ಲಿಸಲು ಬಂದಿರುವದು ವಿಪರ್ಯಾಸವಾಗಿದೆ ಎಂದಾಗ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಕೆ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ನಾಯ್ಕ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತದ ಯೋಜನೆಯಡಿಯಲ್ಲಿ ಮಂಜೂರಾದ ನೀರಾವರಿ ಕಾಮಗಾರಿಯನ್ನು ಅರಣ್ಯ ಇಲಾಖೆ ನಿಲ್ಲಿಸಲು ಬಂದ ಕ್ರಮ ಸರಿಯಲ್ಲ. ಗೊರ್ಟೆ ಪ್ರದೇಶದಲ್ಲಿ ನೀರಿಗಾಗಿ ಹಾಹಾಕಾರ ಏರ್ಪಟ್ಟಿದ್ದು ಇದನ್ನು ಪರಿಹರಿಸುವಲ್ಲಿ ಹಾಗೂ ಸಮಸೈ ಪರಿಹಾರಕ್ಕೆ ಯಾವ ಹೋರಾಟಕ್ಕೂ ತಾನು ಸಿದ್ದ. ಜಿಲ್ಲಾಧಿಕಾರಿಯ ಆದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕಿಮ್ಮತ್ತು ನೀಡದೆ ಇರುವುದು ವಿಷಾದನೀಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News