ಜನ ಚಳವಳಿಗಳಿಗೆ ಮಿಡಿದ ಮುಖ್ಯಮಂತ್ರಿ

Update: 2017-04-14 18:49 GMT

90ರ ದಶಕದ ಆರಂಭದಲ್ಲಿ ದೇಶಕ್ಕೆ ವಕ್ಕರಿಸಿದ ಜಾಗತೀಕರಣದ ಆನಂತರ ದುಡಿಯುವ ಜನ ತಮ್ಮ ಸವಲತ್ತುಗಳನ್ನು ಒಂದೊಂದಾಗಿಯೇ ಕಳೆದುಕೊಳ್ಳುತ್ತಾ ಬಂದಿದ್ದಾರೆ. ತಮ್ಮ ನ್ಯಾಯ ಸಮ್ಮತ ಬೇಡಿಕೆಗಳಿಗಾಗಿ ಹೋರಾಡುವುದೇ ಅಪರಾಧವೆಂದು ಇಂದಿನ ದಿನಗಳಲ್ಲಿ ಪರಿಗಣಿಸಲ್ಪಡುತ್ತಿದೆ. ನೂರಾರು ವರ್ಷಗಳಿಂದ ಕಾಡಿನಲ್ಲಿ ನೆಲೆಸಿದ ಆದಿವಾಸಿಗಳನ್ನು ಅಲ್ಲಿಂದ ಹೊರದಬ್ಬಲು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ಈಗ ಬಳಸಿಕೊಳ್ಳಲಾಗುತ್ತಿದೆ. ನರ್ಮದಾ ಆಂದೋಲನವನ್ನು ಹತ್ತಿಕ್ಕಲಾಗಿದೆ. ದಲಿತ, ದಮನಿತ ಸಮುದಾಯದ ಹೋರಾಟಗಳನ್ನು ಪೊಲೀಸ್ ದೌರ್ಜನ್ಯದ ಮೂಲಕ ಹಿಮ್ಮೆಟ್ಟಿಸಲಾಗಿದೆ. ಇಂತಹ ಕಾಲದಲ್ಲಿ ಜನರ ನೋವು ಮತ್ತು ಸಂಕಟಗಳಿಗೆ ಸ್ಪಂದಿಸುವ ಸರಕಾರಗಳೂ ಈ ದೇಶದಲ್ಲಿವೆ ಎಂಬುದಕ್ಕೆ ಕರ್ನಾಟಕ ಒಂದು ಉತ್ತಮ ಉದಾಹರಣೆಯಾಗಿದೆ.

ಸಮಾಜವಾದಿ ಚಳವಳಿಯಿಂದ ಬಂದ ಇಂದಿಗೂ ಅದೇ ಸಾಮಾಜಿಕ ಕಾಳಜಿಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರವಹಿಸಿಕೊಂಡಾಗಿನಿಂದ ಜನ ಚಳವಳಿಗಳಿಗೆ ಸ್ಪಂದಿಸುವ ರೀತಿ ಉಳಿದ ಸರಕಾರಗಳಿಗೂ ಮಾದರಿಯಾಗಿದೆ. ಅಂತಲೇ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಅವರಿಗೆ ಜನ ಬೆಂಬಲ ನೀಡಿದರು. ಕಳೆದ ವಾರ ಸಿದ್ದರಾಮಯ್ಯನವರ ಸರಕಾರ ಮೂರು ಮುಖ್ಯ ಜನಾಂದೋಲನಗಳಿಗೆ ಸ್ಪಂದಿಸಿದ ರೀತಿ ಶ್ಲಾಘನೀಯವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ಬೇಡಿಕೆಗಳಿಗಾಗಿ ನಡೆಸಿದ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿದೆ. ರಾಜಧಾನಿಗೆ ಬಂದ ಸಾವಿರಾರು ಹೆಣ್ಣುಮಕ್ಕಳು ತಮ್ಮ ಬೇಡಿಕೆ ಈಡೇರುವವರೆಗೆ ಊರಿಗೆ ಹಿಂದಿರುಗುವುದಿಲ್ಲ ಎಂದು ಪಟ್ಟು ಹಿಡಿದರು.

ಈ ಅಂಗನವಾಡಿ ನೌಕರರಿಗೆ ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ ಅವರ ಗೌರವಧನವನ್ನು 1,000 ರೂ. ಹೆಚ್ಚಿಸಿತ್ತು. ಆದರೆ, ಇದು ತಮಗೆ ಸಾಲುವುದಿಲ್ಲವೆಂದು ಈ ಹೆಣ್ಣುಮಕ್ಕಳು ಬೆಂಗಳೂರಿಗೆ ಬಂದು ಮಕ್ಕಳುಮರಿಗಳನ್ನು ಕಟ್ಟಿಕೊಂಡು ನಡುರಸ್ತೆಯಲ್ಲೇ ಮಲಗಿ ಘೋಷಣೆ ಕೂಗಿದರು. ಬಿಸಿಲು ಮತ್ತು ಚಳಿಗೂ ಇವರು ಕುಗ್ಗಲಿಲ್ಲ. ಈ ಹೋರಾಟಕ್ಕೆ ರಾಜ್ಯವ್ಯಾಪಿ ಬೆಂಬಲವೂ ದೊರಕಿತು. ಅವರ ಬೇಡಿಕೆ ನ್ಯಾಯಸಮ್ಮತವಾಗಿತ್ತು. ತಾವು ಮರ್ಯಾದೆಯಿಂದ ಜೀವನ ಮಾಡಲು ಸಾಕಾಗುವಷ್ಟು ಸಂಬಳ ಕೊಡಿ ಎಂಬುದು ಅವರ ಆಗ್ರಹವಾಗಿತ್ತು. ಅವರ ಈ ಒತ್ತಾಯ ಹೊಸದೇನಲ್ಲ. ಹಿಂದಿನ ಸರಕಾರಗಳಿದ್ದಾಗಲೂ ಅವರು ಬೆಂಗಳೂರಿಗೆ ಬಂದು ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಆದರೆ, ಅವರ ಬೇಡಿಕೆಗೆ ಹಿಂದಿನ ಸರಕಾರಗಳು ಸ್ಪಂದಿಸಿರಲಿಲ್ಲ. ಈ ಬಾರಿ ಹಾಗಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಗನವಾಡಿ ನೌಕರರ ಸಂಘಟನೆಯ ನಾಯಕರನ್ನು ಮಾತುಕತೆಗೆ ಕರೆದು ಬಜೆಟ್‌ನಲ್ಲಿ ಈಗಾಗಲೇ ಘೋಷಿಸಲಾದ ಒಂದು ಸಾವಿರ ರೂ. ಜೊತೆಗೆ ಮತ್ತೆ 1,000 ರೂ. ನೀಡುವುದಾಗಿ ಭರವಸೆ ನೀಡಿದರು. ಈ ಹೋರಾಟದ ಫಲವಾಗಿ ಅಂಗನವಾಡಿ ನೌಕರರ ಸಂಬಳ ಒಟ್ಟು 2,000 ರೂ. ಹೆಚ್ಚಳವಾಯಿತು.

ನ್ಯಾಯವಾಗಿ ಈ ಹೆಚ್ಚುವರಿ ವೇತನವನ್ನು ಕೇಂದ್ರ ಸರಕಾರ ಕೊಡಬೇಕಾಗಿತ್ತು. ಆದರೆ, ಕೇಂದ್ರ ಸರಕಾರ ಕೈಕೊಟ್ಟದ್ದರಿಂದ ರಾಜ್ಯ ಸರಕಾರವೇ ಇದನ್ನು ಭರಿಸಬೇಕಾಯಿತು. ತಮ್ಮ ಬೇಡಿಕೆಗೆ ಸರಕಾರ ಸ್ಪಂದಿಸಿದ ರೀತಿಯಿಂದ ಅಂಗನವಾಡಿ ಹೆಣ್ಮಕ್ಕಳು ಸಂತಸಗೊಂಡಿದ್ದಾರೆ. ಇದೇ ರೀತಿ ಉತ್ತರ ಕರ್ನಾಟಕದ ಜೀವವೈವಿಧ್ಯತಾಣವಾದ ಕಪ್ಪತಗುಡ್ಡ ರಕ್ಷಣೆಯ ಪ್ರಶ್ನೆಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಚಳವಳಿಗೆ ಸ್ಪಂದಿಸಿದ ರೀತಿ ಶ್ಲಾಘನೀಯವಾಗಿದೆ. ಉತ್ತರಕರ್ನಾಟಕದ ಬಯಲುಸೀಮೆಯ ಏಕೈಕ ಹಸಿರುಬೆಟ್ಟವಾದ ಈ ಗುಡ್ಡವನ್ನು ಗಣಿಗಾರಿಕೆಗೆ ಹಾಗೂ ವ್ಯಾಪಾರಿ ಚಟುವಟಿಕೆಗಳಿಗೆ ಮೀಸಲಾಗಿಡಲು ಈ ಮುಂಚೆ ಸರಕಾರ ತೀರ್ಮಾನಿಸಿತ್ತು. ಈ ಸರಕಾರದ ಕೆಲ ಪ್ರಭಾವಿ ಮಂತ್ರಿಗಳು, ಗಣಿ ಉದ್ಯಮದ ಲಾಬಿಗಳು ಹಾಗೂ ಅಧಿಕಾರಿಗಳು ಸೇರಿ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡುವಲ್ಲಿ ಯಶಸ್ವಿಯಾಗಿದ್ದರು. ಇದನ್ನು ಪ್ರತಿಭಟಿಸಿ ಉತ್ತರಕರ್ನಾಟಕದ ಜನತೆ ಗದಗಿನ ತೋಟಂದಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಕಪ್ಪತಗುಡ್ಡ ಉಳಿಸಿಕೊಳ್ಳಲು ಆಂದೋಲನವನ್ನು ನಡೆಸಿದ್ದರು.

ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿಯವರು ಯಾವುದೇ ಒತ್ತಡಕ್ಕೆ ಮಣಿಯದೇ ಜನರ ನೋವಿಗೆ ಸ್ಪಂದಿಸಿದರು. 80,000 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಹಾಗೂ 65 ಕಿ.ಮೀ. ಉದ್ದದ ಈ ಅರಣ್ಯ ಪ್ರದೇಶದಲ್ಲಿ ಅಪರೂಪದ ಔಷಧ ಸಸ್ಯಗಳಿವೆ. ಈ ಜೀವವೈವಿಧ್ಯ ತಾಣವನ್ನು ಉಳಿಸಿಕೊಳ್ಳಲು ಅಲ್ಲಿನ ಜನತೆ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ. ಗಣಿ ಲಾಬಿಯ ಒತ್ತಡಕ್ಕೆ ಮಣಿಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಪ್ಪತಗುಡ್ಡ ಪ್ರದೇಶವನ್ನು ಮತ್ತೆ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿದರು. ಇದರಿಂದ ಆ ಭಾಗದ ಜನತೆ ನೆಮ್ಮದಿಯಿಂದ ಉಸಿರಾಡುವಂತಾಗಿದೆ. ಮೂರನೆಯದಾಗಿ ದಿಡ್ಡಳ್ಳಿಯ ಆದಿವಾಸಿಗಳು ನಡೆಸಿದ ಹೋರಾಟ ಇಡೀ ರಾಜ್ಯದ ಗಮನ ಸೆಳೆಯಿತು. ಕೊಡಗು ಜಿಲ್ಲೆಯ ಕಾಡಿನಿಂದ ಹೊರದೂಡಲ್ಪಟ್ಟ ನೊಂದ ಜನತೆ ಮುಖ್ಯಮಂತ್ರಿಯವರನ್ನು ಕಾಣಲು ಬೆಂಗಳೂರಿಗೆ ಜಾಥಾ ಹೊರಟರು. ದೊರೆಸ್ವಾಮಿಯವರಂತಹ ಹಿರಿಯ ಗಾಂಧಿವಾದಿಗಳು ಜಾಥಾದ ನೇತೃತ್ವ ವಹಿಸಿದ್ದರು.

ಆದರೆ, ಜಾಥಾ ಬೆಂಗಳೂರಿಗೆ ತಲುಪುವ ಮೊದಲೇ ಮುಖ್ಯಮಂತ್ರಿಯವರು ಈ ಚಳವಳಿಯ ನಾಯಕರನ್ನು ಮಾತುಕತೆಗೆ ಕರೆದು ಅವರ ಬೇಡಿಕೆಯನ್ನು ಆಲಿಸಿದರು. ಈ ಜನ ನೆಲೆಸಿದ ಪ್ರದೇಶ ಮೀಸಲು ಅರಣ್ಯ ಎಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ, ಚಳವಳಿಗಾರರು ಅದು ಮೀಸಲು ಅರಣ್ಯ ಅಲ್ಲ ಎಂದು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟರು. ಈ ಹಂತದಲ್ಲಿ ಇದು ಮೀಸಲು ಅರಣ್ಯ ಹೌದೋ ಅಲ್ಲವೋ ಎಂದು ಪರಿಶೀಲಿಸಿ ಮೀಸಲು ಅರಣ್ಯವಾಗಿರದಿದ್ದರೆ ಅದೇ ಜಾಗದಲ್ಲಿ ಆ ಜನರಿಗೆ ನೆಲೆ ಕಲ್ಪಿಸಲು ಸರಕಾರ ಒಪ್ಪಿಕೊಂಡಿದೆ. ಹೀಗಾಗಿ ಮನೆಮಾರುಕಳೆದುಕೊಂಡು ಬೀದಿಗೆ ಬಿದ್ದಿದ್ದ ಈ ಜನ ತುಸು ನಿರಾಳವಾಗಿರುವಂತಾಗಿದೆ. ಇಂತಹ ಸಮಸ್ಯೆಗಳನ್ನು ಸರಕಾರ ಸಹಾನುಭೂತಿಯಿಂದ ಪರಿಶೀಲಿಸಬೇಕಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರಶಾಹಿಯ ಒತ್ತಡಕ್ಕೆ ಮಣಿದು ಪೊಲೀಸ್ ದೌರ್ಜನ್ಯದ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿದರೆ ಅದು ಸರಕಾರಕ್ಕೆ ತಿರುಗುಬಾಣವಾಗಿ ಪರಿಣಮಿಸುತ್ತದೆ. ಅಂತಲೇ ಈ ಮೂರೂ ಹೋರಾಟಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ತೆಗೆದುಕೊಂಡ ಕ್ರಮ ಸೂಕ್ತವಾಗಿದೆ.

ಈ ಮೂರು ಹೋರಾಟಗಳು ಮಾತ್ರವಲ್ಲ ರಾಜ್ಯದ ವಿವಿಧ ಕಡೆ ಜನಸಾಮಾನ್ಯರು ನೂರಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರ ನೋವು ಮತ್ತು ಸಂಕಟಗಳಿಗೆ ಸ್ಥಳೀಯ ಆಡಳಿತ ಸ್ಪಂದಿಸುತ್ತಿಲ್ಲ. ತಮ್ಮ ಬೇಡಿಕೆಗಳಿಗಾಗಿ ಬೆಂಗಳೂರಿಗೆ ಜಾಥಾ ಹೊರಟಿದ್ದ ಹೊಸಪೇಟೆಯ ನೀರಾವರಿ ಇಲಾಖೆಯ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರಕಾರ ಇವರ ಬಗ್ಗೆಯೂ ಗಮನ ಹರಿಸಿ ಈ ಕಾರ್ಮಿಕ ನಾಯಕರನ್ನು ಮಾತುಕತೆಗೆ ಕರೆದು ಅವರ ಬೇಡಿಕೆಗಳನ್ನು ಈಡೇರಿಸುವುದು ಅಗತ್ಯವಾಗಿದೆ. ಜನ ಸುಮ್ಮನಿದ್ದರೆ ಸರಕಾರವೂ ಸ್ಪಂದಿಸುವುದಿಲ್ಲ. ತಮ್ಮ ಬೇಡಿಕೆಗಳಿಗಾಗಿ ಅವರು ಹೋರಾಟಕ್ಕಿಳಿಯಲೇ ಬೇಕು. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಒಮ್ಮತದಿಂದ ಹೋರಾಡಿದರೆ ಎಂತಹ ಸರಕಾರವನ್ನಾದರೂ ಮಣಿಸಬಹುದು.

ಸರಕಾರದಲ್ಲಿದ್ದವರೂ ಜನರ ನೋವಿಗೆ ಸ್ಪಂದಿಸಿದರೆ ಪರಿಸ್ಥಿತಿ ಉಲ್ಬಣಗೊಳ್ಳುವುದಿಲ್ಲ. ಎಲ್ಲ ಚಳವಳಿಗಳನ್ನು ಕೂಡಾ ಪೊಲೀಸ್ ದೌರ್ಜನ್ಯದಿಂದ ಹತ್ತಿಕ್ಕಲು ಹೊರಟರೆ ಹತಾಶರಾದ ಜನ ಹಿಂಸಾಚಾರಕ್ಕೆ ಇಳಿಯುತ್ತಾರೆ. ಆನಂತರ ನಕ್ಸಲ್‌ವಾದದ ಕಡೆ ಆಕರ್ಷಿತರಾಗುತ್ತಾರೆ. ಇಂತಹ ಅಪಾಯಕಾರಿ ಬೆಳವಣಿಗೆ ಆಗಬಾರದು ಎಂಬ ಕಾಳಜಿ ಸರಕಾರಕ್ಕೆ ಇದ್ದರೆ ಚಳವಳಿಗಳಿಗೆ ಸಂಬಂಧಿಸಿದಂತೆ ಅದರ ನೀತಿ ಬದಲಾಗಬೇಕು. ಜನ ಚಳವಳಿಗಳನ್ನು ಮಾನವೀಯ ದೃಷ್ಟಿಯಲ್ಲಿ ಕಾಣಬೇಕು. ಈ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದವಾರ ನಡೆದ ಮೂರೂ ಚಳವಳಿಗಳ ಬಗ್ಗೆ ತೋರಿಸಿದ ಸಹಾನುಭೂತಿ ಮತ್ತು ಸ್ಪಂದಿಸಿದ ರೀತಿ ಸಮರ್ಥನೀಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News