ಹೈಕಮಾಂಡ್ ಭೇಟಿಗೆ ಸಿಎಂ ದಿಲ್ಲಿಗೆ ದೌಡು
ಹೊಸದಿಲ್ಲಿ, ಎ.15: ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಗೆ ಶನಿವಾರ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.
ದಿಲ್ಲಿ ಭೇಟಿಯ ವೇಳೆ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿರುವ ಸಿಎಂ, ಪರಿಷತ್‌ನ ನಾಮನಿರ್ದೇಶಿತ ಸದಸ್ಯರ ನೇಮಕದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಖಾಲಿ ಇರುವ ಎರಡು ಸಚಿವ ಸ್ಥಾನ ತುಂಬುವ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂರು ನಾಮನಿರ್ದೇಶಿತ ಸದಸ್ಯರ ಸ್ಥಾನಕ್ಕೆ ಆರು ಹೆಸರು ಕೇಳಿಬಂದಿದೆ. ಸಿ.ಎಂ. ಲಿಂಗಪ್ಪ, ಜಿ.ಸಿ. ಚಂದ್ರಶೇಖರ್(ಒಕ್ಕಲಿಗರು), ಮೋಹನ್ ಕೊಂಡಜ್ಜಿ, ರಾಣಿ ಸತೀಶ್(ಲಿಂಗಾಯತರು), ಕೆ.ಪಿ. ನಂಜುಂಡಿ ಹಾಗೂ ಮುಖ್ಯಮಂತ್ರಿ ಚಂದ್ರು (ಒಬಿಸಿ)ಅವರ ಹೆಸರಿದೆ.
ಎರಡು ಸಚಿವ ಸ್ಥಾನಕ್ಕೆ ಮೂವರ ಹೆಸರು ಕೇಳಿಬಂದಿದ್ದು, ಹೊಸದುರ್ಗದ ಶಾಸಕ ಬಿ.ಜಿ. ಗೋವಿಂದಪ್ಪ, ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ್ ಹಾಗೂ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ.