×
Ad

ಹಣದ ವಿವಾದ : ಪತ್ನಿ ಹತ್ಯೆಗೈದ ಪತಿಯ ಸೆರೆ!

Update: 2017-04-15 19:18 IST

ಶಿವಮೊಗ್ಗ, ಎ. 15: ಲಾರಿ ಖರೀದಿಗೆ ಮಗನಿಗೆ ಕೊಡಿಸಿದ್ದ ಹಣ ವಾಪಾಸ್ ನೀಡದ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿಯ ನಡುವೆ ಆರಂಭವಾದ ಕಲಹ ವಿಕೋಪಕ್ಕೆ ತಿರುಗಿ ಪತ್ನಿಯ ಕೊಲೆ ಮಾಡಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮಾರಿಗುಡ್ಡ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಸುಬ್ರಹ್ಮಣ್ಯ (56) ಆರೋಪಿತ ಪತಿ ಎಂದು ಗುರುತಿಸಲಾಗಿದೆ. ರತ್ನಮ್ಮ (50) ಕೊಲೆಗೀಡಾದ ಪತ್ನಿಯಾಗಿದ್ದಾರೆ. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇನ್ಸ್‌ಪೆಕ್ಟರ್ ಮಂಜುನಾಥಗೌಡ ನೇತೃತ್ವದ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೀಡಾದ ರತ್ನಮ್ಮರವರು ಪುತ್ರನಿಗೆ ಲಾರಿ ಖರೀದಿಸಲು ಪತಿಯಿಂದ ಹಣ ಕೊಡಿಸಿದ್ದರು. ಆದರೆ ಪುತ್ರನು ಹಣ ವಾಪಾಸ್ ಮಾಡಿರಲಿಲ್ಲ. ಈ ಕುರಿತಂತೆ  ಪತಿ - ಪತ್ನಿಯ ನಡುವೆ ಕಲಹವಾಗುತ್ತಿತ್ತು ಎನ್ನಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ದಂಪತಿಯ ನಡುವೆ ಕಲಹ ಶುರುವಾಗಿದೆ. ಪುತ್ರನಿಂದ ಹಣ ವಾಪಾಸ್ ಕೊಡಿಸುವಂತೆ ಆರೋಪಿ ಒತ್ತಾಯಿಸಿದ್ದಾನೆ. ತಾಳ್ಮೆ ಕಳೆದುಕೊಂಡು ಪತ್ನಿಯ ಮೇಲೆ ಹಲ್ಲೆ ನಡೆಸಿ, ಮನೆಯಲ್ಲಿದ್ದ ಕೊಡಲಿಯಿಂದ ದಾಳಿ ಮಾಡಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ರತ್ನಮ್ಮರವರನ್ನು  ಕುಟುಂಬದ ಸದಸ್ಯರು ವಾಹನವೊಂದರಲ್ಲಿ ಸಮೀಪದ ಆಸ್ಪತ್ರೆಗೆ ಕರೆತರುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News