×
Ad

ದಿಡ್ಡಳ್ಳಿ ಜಾಗ ಪರಿಶೀಲನೆ : ಕಂದಾಯ ಭೂಮಿಯಾಗಿದ್ದರೆ ಹಕ್ಕುಪತ್ರ ; ಸಚಿವ ಕಾಗೋಡು ಭರವಸೆ

Update: 2017-04-15 20:44 IST

ಮಡಿಕೇರಿ ಏ.15:ದಿಡ್ಡಳ್ಳಿಯ ಮೂಲ ನಿವಾಸಿ ಗಿರಿಜನರಿಗೆ ನಿವೇಶನ ಹಾಗೂ ಭೂಮಿ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಈ ಸಂಬಂಧ ದಿಡ್ಡಳ್ಳಿಯ ಜಾಗ ಅರಣ್ಯ ಇಲಾಖೆಗೆ ಸೇರಿದೆಯೇ ಅಥವಾ ಕಂದಾಯ ಇಲಾಖೆಗೆ ಸೇರಿದೆಯೇ ಎಂಬ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಮೂಲ ನಿವಾಸಿ ಗಿರಿಜನರಿಗೆ ಶಾಶ್ವತ ನೆಲೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು.
 

ಜಿಲ್ಲೆಯ ದಿಡ್ಡಳ್ಳಿಗೆ ಶನಿವಾರ ಭೇಟಿ ನೀಡಿ ನಿರಾಶ್ರಿತರ ಅಹವಾಲು ಆಲಿಸಿ ನಂತರ ಸಚಿವರು ಮಾತನಾಡಿ,ದಿಡ್ಡಳ್ಳಿಯ ಭೂಮಿ ಕಂದಾಯ ಇಲಾಖೆಗೆ ಸೇರಿದ್ದರೆ ಮೂರೇ ದಿನದಲ್ಲಿ ಹಕ್ಕು ಪತ್ರ ವಿತರಿಸಲಾಗುವುದು. ಅರಣ್ಯ ಇಲಾಖೆಗೆ ಜಾಗ ಸೇರಿದ್ದರೆ ಪರ್ಯಾಯ ಭೂಮಿ ಗುರುತಿಸಬೇಕಾಗುತ್ತದೆ ಎಂದು ತಿಳಿಸಿದರು.

 ಮೂಲ ನಿವಾಸಿ ಗಿರಿಜನರು ಯಾವ ಯಾವ ಹಾಡಿಯಲ್ಲಿ ವಾಸ ಮಾಡುತ್ತಿದ್ದೀರ, ಅಲ್ಲಿಯೇ ಜಾಗವನ್ನು ಗುರ್ತಿಸಿ, ನಿವೇಶನ ಹಾಗೂ ಭೂಮಿ ಹಂಚಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಕಂದಾಯ ಸಚಿವರು ಹೇಳಿದರು.

 ಗಿರಿಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಆಶ್ರಮ ಶಾಲೆ, ವಸತಿ ಶಾಲೆ, ವಿದ್ಯಾರ್ಥಿ ನಿಲಯ ಹೀಗೆ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಕಾಗೋಡು ತಿಮ್ಮಪ್ಪ ಅವರು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿ ನೀಡುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನವೂ ಹಾಲು ವಿತರಿಸಲಾಗುತ್ತದೆ. ನರೇಗಾ ಯೋಜನೆಯಡಿ ಉದ್ಯೋಗ ಪಡೆಯಿರಿ ಎಂದು ಅವರು ಹೇಳಿದರು.

ಸರಕಾರ ಭೂ ಸುಧಾರಣಾ ಕಾನೂನು ಜಾರಿಗೊಳಿಸಿದೆ. ಬೇರೆಯವರ ಭೂಮಿಯಲ್ಲಿ ವಾಸ ಮಾಡುತ್ತಿದ್ದರೆ ಅಕ್ರಮ-ಸಕ್ರಮ ಯೋಜನೆಯಡಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಗಿರಿಜನರಿಗೆ ಸಲಹೆ ಮಾಡಿದರು. ಪ್ರತಿಯೊಂದು ಕುಟುಂಬಕ್ಕೂ ಭೂಮಿ ಸಿಗುವ ಅವಕಾಶವಿದ್ದು, ಅದನ್ನು ಸಮರ್ಪಕವಾಗಿ ಬಳಿಸಿಕೊಳ್ಳುವಂತೆ ಕಾೋಡು ಅವರು ಸಲಹೆ ಮಾಡಿದರು.

 ಈ ಸಂಬಂಧ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸಲು ಪ್ರಮುಖರು ಬೆಂಗಳೂರಿಗೆ ಆಗಮಿಸುವಂತೆ ಸಚಿವರು ಸಲಹೆ ನೀ
ಡಿದರು.

ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಪದ್ಮಿನಿ ಪೊನ್ನಪ್ಪ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಿಜು ಸುಬ್ರಮಣಿ, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ತಹಶೀಲ್ದಾರ ಮಹದೇವಯ್ಯ, ಐಟಿಡಿಪಿ ಅಧಿಕಾರಿ ಪ್ರಕಾಶ್, ಆದಿವಾಸಿ ಮುಖಂಡರಾದ ಅಪ್ಪಾಜಿ, ಮುತ್ತಮ್ಮ ಇತರರು ಹಾಜರಿದ್ದರು.

    ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವರು ದಿಡ್ಡಳ್ಳಿ ಗಿರಿಜನರಿಗೆ ಶಾಶ್ವತ ನೆಲೆ ಕಲ್ಪಿಸಲಾಗುವುದು. ಇಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ದಿಡ್ಡಳ್ಳಿಯಲ್ಲಿ ಅವಕಾಶವಿದ್ದರೆ, ನಿವೇಶನ ಹಾಗೂ ಭೂಮಿ ಹಂಚಿಕೆ ಮಾಡಲಾಗುವುದು, ಇಲ್ಲದಿದ್ದಲ್ಲಿ ಬೇರೆ ಕಡೆ ಭೂಮಿ ಗುರುತಿಸಲಾಗುವುದು ಎಂದು ಅವರು ತಿಳಿಸಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News