ಹಸಿವು ತಿಳಿಯದವರಿಂದ ಅನ್ನ ಭಾಗ್ಯದ ಟೀಕೆ, ಹಸಿವು ಮುಕ್ತ ಕರ್ನಾಟಕ ನನ್ನ ಗುರಿ : ಸಿದ್ದರಾಮಯ್ಯ

Update: 2017-04-15 16:57 GMT

ಬೆಂಗಳೂರು, ಎ. 15  : ಅನ್ನ ಭಾಗ್ಯದಂತಹ ಯೋಜನೆಗಳನ್ನು ಜನಮರುಳು ಯೋಜನೆ ಎಂದು ಟೀಕಿಸುವವರಿಗೆ ಹಸಿವೆಂದರೆ ಏನೆಂದು ಗೊತ್ತಿಲ್ಲ. ಹಾಗಾಗಿ ಅವರ ಟೀಕೆಯನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. 

" ಜ್ವರ ಪೀಡಿತ ಮಗುವೊಂದು ರಾಗಿ ಮುದ್ದೆ ತಿನ್ನಲು ಆಗದೆ ಇದ್ದಾಗ ಆ ಮಗುವಿನ ತಾಯಿ ಒಂದು ಹಿಡಿ ಅಕ್ಕಿಗಾಗಿ ಅಂಗಲಾಚುತ್ತಿದ್ದುದನ್ನು ನಾನು ನನ್ನ ಊರಿನಲ್ಲಿ ನೋಡಿದ್ದೇನೆ. ಹಾಗಾಗಿ ಅರ್ಹ ಬಡವರಿಗೆ 7 ಕೆಜಿ ಉಚಿತ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ ಪ್ರಾರಂಭಿಸಿದೆ " ಎಂದುಸಿದ್ದರಾಮಯ್ಯ ಹೇಳಿದ್ದಾರೆ.  

" ಪತ್ರಕರ್ತರು ಅದರಲ್ಲೂ ಇಂಗ್ಲಿಷ್ ಪತ್ರಕರ್ತರಿಗೆ ಅನ್ನ ಭಾಗ್ಯದಂತಹ ಯೋಜನೆಗಳನ್ನು ಜನಮರುಳು ಯೋಜನೆ ಎಂದು ತಿರಸ್ಕರಿಸುವ ಪ್ರವೃತ್ತಿ ಇದೆ. ಆದರೆ ಇದು ರಾಜ್ಯವನ್ನು ಹಸಿವು ಮುಕ್ತ ಮಾಡುವ ನನ್ನ ಗುರಿಯ ಭಾಗವಾಗಿದೆ. ಮತ್ತು ನಾನು ಆ ನಿಟ್ಟಿನಲ್ಲಿ ಹಾಗೇ ಮುಂದುವರಿಯುತ್ತೇನೆ " ಎಂದು ಸಿದ್ದು ಹೇಳಿದ್ದಾರೆ. 

" ನಾವು ಇದ್ದ ದುಡ್ಡನ್ನೆಲ್ಲ ಉಚಿತ ಅಕ್ಕಿ ನೀಡಲು ಖರ್ಚು ಮಾಡುತ್ತಿಲ್ಲ. ನೀರಾವರಿ , ರಸ್ತೆಗಳು ಹಾಗು ವಿದ್ಯುತ್ ಕ್ಷೇತ್ರದಲ್ಲಿ ನಾವು ಸಾಕಷ್ಟು ದೊಡ್ಡ ಮೊತ್ತವನ್ನು ಹೂಡುತ್ತಿದ್ದೇವೆ. ರಾಜ್ಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಲು, ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಅಮರ್ತ್ಯ ಸೇನ್ ಹೇಳಿದಂತೆ , ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡದ ಆರ್ಥಿಕ ಅಭಿವೃದ್ಧಿ ನೆಲೆ ನಿಲ್ಲುವುದಿಲ್ಲ ಮತ್ತು ಅದು ಅನೈತಿಕ " ಎಂದು ಸಿದ್ದರಾಮಯ್ಯ ಹೇಳಿದರು. 

" ಜನರು ಹಸಿದಿದ್ದರೆ , ಮಕ್ಕಳು ಖಾಲಿ ಕಾಲಲ್ಲಿ ಶಾಲೆಗೆ ಹೋದರೆ , ಮಹಿಳೆಯರು ಆರೋಗ್ಯವಾಗಿ ಇಲ್ಲದಿದ್ದರೆ ನಾವು ಬಲಿಷ್ಠ ದೇಶ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಜನರು ತಮ್ಮ ಇಷ್ಟದ ಆಹಾರ ಮತ್ತು ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಹೆದರಬೇಕಾದ ಪರಿಸ್ಥಿತಿ ಇದ್ದಾರೆ ನಮ್ಮ ಸಮಾಜ ಬೆಳೆಯುವುದಿಲ್ಲ. ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗು ಪ್ರಜ್ಞಾವಂತ ಸಮಾಜ ನಿರ್ಮಾಣದ ನಮ್ಮ ಧ್ಯೇಯಕ್ಕೆ ಜಯವಾಗಲಿದೆ.

ನಮಗೆ ಈ ಬಗ್ಗೆ ಹೆಮ್ಮೆ ಇದೆ. ನಾವು ನೀಡಿರುವ ಭರವಸೆಗಳಿಗೆ ನಾವು ಅಷ್ಟೇ ಅನುದಾನ ನೀಡಿದ್ದೇವೆ . ಪ್ರತಿಯೊಂದು ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ನಾನು ವೈಯಕ್ತಿಕವಾಗಿ ಪರಿಶೀಲಿಸುತ್ತಿದ್ದೇನೆ " ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News