ಇಸ್ಲಾಮ್ ವೇಗವಾಗಿ ಬೆಳೆಯಲು ಕುರ್ ಆನ್ ಮತ್ತು ಪ್ರವಾದಿಯವರ ತತ್ವಾದರ್ಶಗಳೇ ಕಾರಣ: ಎ.ಪಿ. ಉಸ್ತಾದ್

Update: 2017-04-16 10:59 GMT

ಸಾಗರ, ಎ.16: ಇಂದಿನ ದಿನಗಳಲ್ಲಿ ಕೆಲ ಮಾಧ್ಯಮಗಳು ಇಸ್ಲಾಮ್ ಧರ್ಮವನ್ನು ತಪ್ಪಾಗಿ ಚಿತ್ರೀಕರಿಸುತ್ತಿದೆ. ಇಸ್ಲಾಮ್ ಧರ್ಮ ಹಿಂಸೆಯಿಂದ ಬೆಳೆದು ಬಂದ ಧರ್ಮವಲ್ಲ, ಬದಲಾಗಿ ಶಾಂತಿ, ಸಮಾಧಾನದ ಧರ್ಮವಾಗಿದೆ ಎಂದು ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು

ಇಲ್ಲಿನ ರಾಜಭಕ್ಷ್ ದರ್ಗಾ ಆವರಣದಲ್ಲಿ ಬದ್ರಿಯಾ ಮಸೀದಿ ಮತ್ತು ಎಸ್ಸೆಸ್ಸೆಫ್ ಸ್ಥಳೀಯ ಶಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುನ್ನೀ ಮಹಾ ಸಮ್ಮೇಳನದ ಮುಖ್ಯ ಪ್ರಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.

ಇಸ್ಲಾಮ್ ಧರ್ಮದ ವಿರುದ್ಧ ಎಷ್ಟೇ ಅಪಪ್ರಚಾರ ನಡೆಸಿದ್ದರೂ ಇಸ್ಲಾಮ್ ಗೆ ಯಾವುದೇ ಅಪಾಯ ಸಂಭವಿಸಿಲ್ಲ. ಜಗತ್ತಿನಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಧರ್ಮವೊಂದಿದ್ದರೆ ಅದು ಇಸ್ಲಾಮ್ ಮಾತ್ರವಾಗಿದೆ. ಇದಕ್ಕೆ ಪ್ರಮುಖ ಕಾರಣ ಪವಿತ್ರ ಕುರ್ ಆನ್ ಮತ್ತು ಪೈಗಂಬರರ ಜೀವನದ ತತ್ವಾದರ್ಶಗಳು ಎಂದವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಇಹ್ಸಾನ್ ಸಂಸ್ಥೆಯ ಅಧ್ಯಕ್ಷ ಮೌಲಾನಾ ಎನ್.ಕೆ.ಎಂ. ಶಾಫಿ ಸಅದಿ, ಸೌಹಾರ್ದ ಮತ್ತು ಸಹಿಷ್ಣುತೆಗೆ ಸಂಬಂಧಪಟ್ಟಂತೆ ಕುರ್ ಆನ್‌ನ ಹಲವು ಶ್ಲೋಕಗಳಲ್ಲಿ ಉಲ್ಲೇಖವಿದೆ.  ಕೆಲವರು ಕುರ್ ಆನ್‌ ಅರ್ಥೈಸಿಕೊಳ್ಳುವಲ್ಲಿ ವಿಫಲಾಗಿದ್ದಾರೆ. ಪ್ರವಾದಿ ಪೈಗಂಬರರ ಜೀವನ ವೃತ್ತಾಂತ ತಿಳಿದ ವ್ಯಕ್ತಿ ಯಾವತ್ತೂ ಕೋಮುವಾದಿ, ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂದರು.

ಬದ್ರಿಯಾ ಜುಮಾ ಮಸೀದಿಯ ಧರ್ಮಗುರುಗಳಾದ ಅಬ್ದುರ್ರಹ್ಮಾನ್ ಸಖಾಫಿ ಮಾತನಾಡಿದರು. ಬದ್ರಿಯಾ ಮಸೀದಿ ಅಧ್ಯಕ್ಷ ಎಸ್. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ನ, ಭಾಷಾ ತಂಙಳ್, ಎಸ್.ಎಚ್.ಅಬ್ದುಲ್ ಖಾದರ್, ಸೈಯದ್ ಇಕ್ಬಾಲ್ ಸಾಬ್, ಮೊಯ್ದಿನ್ ಸಾಬ್, ಬಶೀರ್ ಮದನಿ, ಅಬ್ದುಲ್ ಜಬ್ಬಾರ್ ಸಅದಿ, ಸಿದ್ದೀಕ್ ಸಖಾಫಿ, ಮುನೀರ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಗಲ್ ಉಸ್ತಾದ್ ಎ.ಸಿ. ಮಹ್ಮದ್ ಫೈಝಿ ದುಆ ನೆರವೇರಿಸಿದರು. ಅಬ್ದುಲ್ ಲತೀಫ್ ಸಅದಿ ಸ್ವಾಗತಿಸಿದರು. ಇಮ್ರಾನ್ ಸಾಗರ್ ವಂದಿಸಿದರು. ಮುನಾವರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News