ಅಕ್ರಮ ಮರಳು ಸಾಗಾಟ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ
ಸಾಗರ, ಎ.16: ಅಕ್ರಮ ಮರಳು ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಸಂಬಂಧ ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಹೊಳೆ ದಂಡೆಯಲ್ಲಿ ಅಗಳ ತೋಡುವ ಮೂಲಕ ಅಕ್ರಮ ನಿಯಂತ್ರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಹಿನ್ನೀರಿನಲ್ಲಿ ಮರಳು ಎತ್ತಿ, ಸಾಗಾಟ ಮಾಡುತ್ತಿದ್ದ ಹೆಗ್ಗಟ್ಟು, ಗೀಜಗ, ಹೈತೂರು, ಇಡುವಳ್ಳಿ ಭಾಗದಲ್ಲಿ ಇಲಾಖೆ ವತಿಯಿಂದ 5 ಅಡಿ ಉದ್ದ ಹಾಗೂ 4 ಅಡಿ ಅಗಲದ ಅಗಳವನ್ನು ತೋಡಿ, ಮರಳು ತುಂಬಿದ ವಾಹನ ಸಾಗಾಟ ಮಾಡಲು ಸಾಧ್ಯವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಸುರೇಶ್, ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಈ ತಿಂಗಳು ಅಕ್ರಮ ಮರಳು ಸಾಗಾಣಿಕೆಗೆ ಸಂಬಂಧಪಟ್ಟಂತೆ 6 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎನ್ನುವ ಪ್ರದೇಶದಲ್ಲಿ ಪೊಲೀಸರನ್ನು ನೇಮಕ ಮಾಡಲಾಗಿದೆ. ಪೊಲೀಸರು ಎಲ್ಲ ಭಾಗಗಳಲ್ಲೂ ರಾತ್ರಿ-ಹಗಲು ಕಾಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮರಳು ತುಂಬಿಕೊಂಡು ಹಿನ್ನೀರಿನಿಂದ ಹೊರಗೆ ಬರುವ ದಂಡೆಯಲ್ಲಿ ಅಗಳ ತೋಡುವ ಮೂಲಕ ನಿಯಂತ್ರಣಕ್ಕೆ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.