ದಿಡ್ಡಳ್ಳಿ ಆದಿವಾಸಿಗಳು ಮುಖ್ಯವಾಹಿನಿಗೆ ಬರದಂತೆ ಕೆಲ ಶಕ್ತಿಗಳು ತಡೆಯುತ್ತಿವೆ: ಸಚಿವ ಕಾಗೋಡು ತಿಮ್ಮಪ್ಪ
ಮಡಿಕೇರಿ, ಎ.16: ದಿಡ್ಡಳ್ಳಿ ಪ್ರಕರಣಕ್ಕೆ ಸಂಬಂಧಿಸಿ ಕೆಲವರು ಸಮಸ್ಯೆಯನ್ನು ಜೀವಂತವಾಗಿಡಲು ನೋಡುತ್ತಿದ್ದಾರೆ. ಆದಿವಾಸಿಗಳು ಮುಖ್ಯವಾಹಿನಿಗೆ ಬರದಂತೆ ಕೆಲ ಶಕ್ತಿಗಳು ತಡೆಯುತ್ತಿವೆ. ನಾಗರಿಕ ಯುಗದಲ್ಲಿಯೂ ಆದಿವಾಸಿಗಳು ಕಾಡಿನಲ್ಲಿಯೇ ಇರಬೇಕೇ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದ್ದಾರೆ.
ದಿಡ್ಡಳ್ಳಿ ನಿರಾಶ್ರಿತರಿಗೆ ಬಸವನಹಳ್ಳಿ ಬಳಿ ಗುರುತಿಸಲಾಗಿರುವ ಜಾಗಕ್ಕೆ ರವಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಸರಕಾರ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಗೆ ಸಾಕಷ್ಟು ಅನುದಾನ ನೀಡಿದೆ. ನಿವೇಶನ ಜೊತೆಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಬಸವನಹಳ್ಳಿಯ ಜಾಗ ಮಕ್ಕಳ ಭವಿಷ್ಯಕ್ಕೂ ಉಜ್ವಲವಾಗಿದೆ. ರಾಜ್ಯ ಹೆದ್ದಾರಿ ಬಳಿ ಇರುವುದರಿಂದ ಪ್ರವಾಸೋದ್ಯಮದಿಂದ ಉದ್ಯೋಗವೂ ದೊರೆಯಲಿದೆ. ಅದನ್ನು ಬಿಟ್ಟು ಕಾಡಿನಲ್ಲಿಯೇ ಇರುತ್ತೇವೆ ಎಂದರೆ ಹೇಗೆ? ಬದಲಾವಣೆಗೆ ಹೊಂದಿಕೊಳ್ಳುವುದು ಬೇಡವೇ ಎಂದು ಕಾಗೋಡು ತಿಮ್ಮಪ್ಪ ಪ್ರಶ್ನಿಸಿದರು.
ದಿಡ್ಡಳ್ಳಿಯ ನಿರಾಶ್ರಿತರು ಈಗಾಗಲೇ ಗುರುತಿಸಲಾಗಿರುವ ಜಾಗಕ್ಕೆ ಬರುತ್ತಾರೆಯೇ? ಇಲ್ಲವೇ? ಎಂಬುವುದನ್ನು ಕಾದು ನೋಡುತ್ತೇವೆ. ಒಪ್ಪಿಕೊಂಡಲ್ಲಿ ಒಂದು ವಾರದೊಳಗೆ ಹಕ್ಕುಪತ್ರ ವಿತರಿಸಲಾಗುವುದು. ಈ ಸಂಬಂಧ ಎ.19ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಸಭೆ ನಡೆಯಲಿದೆ ಎಂದು ಕಾಗೋಡು ತಿಮ್ಮಪ್ಪ ಮಾಹಿತಿ ನೀಡಿದರು.