ಕಸ್ತೂರಿ ರಂಗನ್ ವರದಿಯ ಬಗ್ಗೆ ವಿಶೇಷ ಗ್ರಾಮಸಭೆ
ಸುಂಟಿಕೊಪ್ಪ, ಎ.16: ಕಸ್ತೂರಿ ರಂಗನ್ ವರದಿಯ ಬಗ್ಗೆ ವಿಶೇಷ ಗ್ರಾಮಸಭೆ ಸುಂಟಿಕೊಪ್ಪ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ವಹಿಸಿದ್ದರು.
ತಾಪಂ ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿ, ಕಸ್ತೂರಿ ರಂಗನ್ ವರದಿಯು ಕೊಡಗಿನ ಮಟ್ಟಿಗೆ ಬಹಳಷ್ಟು ಮಾರಕವಾಗಿ ಪರಿಣಮಿಸಲಿದೆ. ಏಕೆಂದರೆ ಈ ವರದಿಯ ಪ್ರಕಾರ ಯಾವುದೇ ಕೈಗಾರಿಕಾ ಚಟುವಟಿಕೆಗಳನ್ನು ಮಾಡುವಂತಿಲ್ಲ. ಕೃಷಿ ಚಟುವಟಿಕೆಗಳಿಗೆ ಕೀಟನಾಶಕಗಳನ್ನು ಬಳಸುವಂತಿಲ್ಲ. ಇಂತಹ ಪರಿಸ್ಥಿತಿ ಎದುರಾದರೆ ನಾವು ಬದುಕು ಸಾಗಿಸುವುದಕ್ಕೂ ಸಾಧ್ಯವಿಲ್ಲದಾಗುತ್ತದೆ. ಈ ವರದಿಯು ಕೇವಲ ಅರಣ್ಯ ಮತ್ತು ದೇವರಕಾಡುಗಳಿಗೆ ಸಂಬಂಧಿಸಿದರೆ ನಮ್ಮ ಅಭ್ಯಂತರವಿಲ್ಲ. ನಮ್ಮ ಜೀವನ ಸುಖಕರವಾಗಿರಬೇಕಾದರೆ ಈ ವರದಿಯನ್ನು ತಿರಸ್ಕಾರಿಸಲೇಬೇಕಾಗಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಕೆ.ಇ.ಕರೀಂ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಇಡೀ ಕೊಡಗಿಗೆ ತೊಂದರೆಯಾಗಿದೆ. ಅದು ಕೇವಲ ಅರಣ್ಯ ಪ್ರದೇಶಕ್ಕೆ ಮಾತ್ರ ಅನುಷ್ಠಾನಗೊಂಡರೆ ಜನಸಾಮಾನ್ಯರು ನೆಮ್ಮದಿಯಿಂದ ಇರಲು ಸಾಧ್ಯ. ಜನವಸತಿ ಪ್ರದೇಶ, ತೋಟ, ಗದ್ದೆಗಳನ್ನು ಈ ವರದಿಗೆ ಸೇರಿಸಿದರೆ ನಮ್ಮ ಬದುಕು ಬರಡಾಗುತ್ತದೆ ಎಂದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಸದಸ್ಯರಾದ ಸಿ.ಚಂದ್ರ, ನಾಗರತ್ನಾ, ಶಾಹಿದ್, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ಪಿಡಿೊ ಮೇದಪ್ಪ ಉಪಸ್ಥಿತರಿದ್ದರು.