ಹಲ್ಲೆ ಪ್ರಕರಣ: ಮೂವರಿಗೆ 2 ವರ್ಷ ಸಜೆ
Update: 2017-04-16 23:01 IST
ಶಿವಮೊಗ್ಗ, ಎ.16: ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು ಸಹೋದರರಿಗೆ ಶಿವಮೊಗ್ಗದ 3 ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ 2 ವರ್ಷ ಸಜೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಹೊರವಲಯ ಗಾಡಿಕೊಪ್ಪದ ನಿವಾಸಿಗಳಾದ ಉಮೇಶ್, ಸತೀಶ್ ಹಾಗೂ ರಮೇಶ್ ಶಿಕ್ಷೆಗೊಳಗಾದ ಸಹೋದರರೆಂದು ಗುರುತಿಸಲಾಗಿದೆ. ನ್ಯಾಯಾಧೀಶರಾದ ಜೆ. ರಂಗಸ್ವಾಮಿ ಈ ತೀರ್ಪು ನೀಡಿದ್ದು, 75 ಸಾವಿರ ರೂ. ದಂಡದ ಹಣವನ್ನು ಗಾಯಾಳುಗಳಿಗೆ ಪರಿಹಾರ ರೂಪದಲ್ಲಿ ನೀಡುವಂತೆ ಸೂಚಿಸಿದ್ದಾರೆ.
ಘಟನೆ ಹಿನ್ನೆಲೆ: 2011 ನೇ ಫೆಬ್ರವರಿ 9 ರಂದು ಬೇಲಿ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ನೆರೆಮನೆಯ ರಾಜು ಮತ್ತು ಮಂಜುನಾಥ್ ಎಂಬವರೊಂದಿಗೆ ಈ ಮೂವರು ಸಹೋದರರು ಜಗಳ ಮಾಡಿಕೊಂಡಿದ್ದರು. ಈ ಸಂದರ್ಭ ಮಚ್ಚಿನಿಂದ ಹಲ್ಲೆ ನಡೆಸಿದ್ದರು.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.