×
Ad

ಅವ್ಯವಸ್ಥೆಯ ಆಗರ ಭಟ್ಕಳ ಸರಕಾರಿ ಆಸ್ಪತ್ರೆ : ಗಮನಹರಿಸದ ಜನಪ್ರತಿನಿಧಿಗಳು

Update: 2017-04-16 23:09 IST

ಭಟ್ಕಳ, ಎ. 16: ಜನರು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯದೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಒಂದೆಡೆಯಾದರೆ ಜನಸಾಮಾನ್ಯರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದರೆ ಅಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಪದೇ ಪದೇ ರಜೆ ಹಾಕುತ್ತಿರುವ ವಾಸ್ತವ ಸಂಗತಿ ಶನಿವಾರ ಬೆಳಕಿಗೆ ಬಂದಿದೆ. ತಾಲೂಕಿನ ಸರಕಾರಿ ಆಸ್ಪತ್ರೆಗೆ ಹೆರಿಗೆಗೆ ಎಂದು ಬಂದ ಗರ್ಭಿಣಿಯರನ್ನು ಆಸ್ಪತ್ರೆಯ ನರ್ಸ್‌ಗಳು ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಹೇಳುವ ಮೂಲಕ ಬೇರೆ ಆಸ್ಪತ್ರೆಗೆ ಕಳುಹಿಸುವುದರ ಜೊತೆಗೆ ಚಿಕಿತ್ಸೆ ಪಡೆಯುವವರೊಂದಿಗೆ ಬೇಜಬಾವ್ದಾರಿತನದಿಂದ ವರ್ತಿಸುತ್ತಿದ್ದಾರೆ. ಇದರಿಂದಾಗಿ ಬೇಸತ್ತ ಸಾರ್ವಜನಿಕರು ತುಂಬುಗರ್ಭಿಣಿ ಯರನ್ನು ವಿಧಿಯಿಲ್ಲದೆ ಪಕ್ಕದ ಹೊನ್ನಾವರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆರಿಗೆ ವಿಭಾಗದ ವೈದ್ಯರು ರಜೆಯಲ್ಲಿದ್ದರೆ ಹೆರಿಗೆಗೆ ಬರುವಂತಹ ಗರ್ಭಿಣಿಯರ ಪಾಡೆನೂ? ಎನ್ನುವುದು ಈ ಘಟನೆಯಿಂದ ತಿಳಿದು ಬರುತ್ತದೆ. ಪದೇ ಪದೇ ವೈದ್ಯರು ರಜೆ ಹಾಕಿದ್ದಾಗೆಲ್ಲ ಇಲ್ಲಿನ ನರ್ಸ್‌ಗಳು ಚಿಕಿತ್ಸೆಗಾಗಿ ಬರುವಂತಹ ಗರ್ಭಿಣಿಯರನ್ನು ಒಂದು ರೀತಿಯಲ್ಲಿ ತುಚ್ಚವಾಗಿ ನೋಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಶನಿವಾರದಂದು ಎಂದಿನಂತೆ 3-4 ಗರ್ಭಿಣಿ ಮಹಿಳೆಯರು ಹೆರಿಗೆಗೆ ಬಂದಿದ್ದರು.

ಈ ಸಂದಭರ್ದಲ್ಲಿ ಗರ್ಭಿಣಿ ಮಹಿಳೆಯರು ವೈದ್ಯರ ಕೊಠಡಿಗೆ ಹೋಗಿ ನೋಡಿದಾಗ ವೈದರು ಲಭ್ಯವಿರಲಿಲ್ಲ ಈ ಕುರಿತು ನರ್ಸ್‌ಗಳ ಹತ್ತಿರ ವಿಚಾರಿಸಿದಾಗ ನರ್ಸ್‌ಗಳು ಹಾರಿಕೆ ಉತ್ತರ ನೀಡಿ, ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ನರ್ಸ್‌ಗಳ ಈ ವರ್ತನೆಗೆ ಗರ್ಭಿಣಿಯರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ತಕ್ಷಣಕ್ಕೆ ಹೊನ್ನಾವರದ ಸರಕಾರಿ ಆಸ್ಪತ್ರೆಗೆ ಕರೆದೊಯುತ್ತಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ತಾಲೂಕು ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್‌ಕುಮಾರ್ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ವರದಿ ಪಡೆದುಕೊಂಡು ಅತೀ ಶೀಘ್ರದಲ್ಲಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮಾಧ್ಯಮದವರ ಮುಂದೆ ತಿಳಿಸಿದ್ದರು. ಆದರೆ, ಅವರ ಮಾತು ಯಾವುದು ಕಾರ್ಯರೂಪಕ್ಕೆ ಬರಲಿಲ್ಲ. ಒಟ್ಟಿನಲ್ಲಿ ಭಟ್ಕಳ ತಾಲೂಕು ಆಸ್ಪತ್ರೆಯ ಅವ್ಯವಸ್ಥೆ ಪದೇಪದೇ ಬಹಿರಂಗಕ್ಕೆ ಬರುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಇತ್ತ ಕಡೆಗಮನ ಹರಿಸದೇ ಇರುವುದು ನೋಡಿದರೆ ಆಸ್ಪತ್ರೆ ಸ್ಥಿತಿ ಏನಾದರೂ ಆಗಲಿ ಎಂಬಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News