×
Ad

ಎಟಿಎಂ ದರೋಡೆ: ನಾಲ್ವರು ಆರೋಪಿಗಳ ಬಂಧನ

Update: 2017-04-17 18:17 IST

ತುಮಕೂರು, ಎ.17: ನಗರದ ಗುಬ್ಬಿ ಗೇಟ್‌ನ ಕರ್ಣಾಟಕ ಬ್ಯಾಂಕ್ ಎಟಿಎಂ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ತುರುವೇಕೆರೆ ಸಿಪಿಐ ರಾಮಚಂದ್ರ ನೇತೃತ್ವದ ತಂಡ ಯಶಸ್ವಿಯಾಗಿದೆ.

ದಾಬಸ್‌ಪೇಟೆಯ ಮೋಹನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲೂರಿನ ಪ್ರವೀಣ, ಹಾಸನದ ಸ್ವಾಮಿ, ಹಿರೀಸಾವೆಯ ವೈಭವ್ ಬಂಧಿತ ದರೋಡೆಕೋರರಾಗಿದ್ದು, ಇವರಿಂದ 15 ಲಕ್ಷ ರೂ., ಇಂಡಿಕಾ ಕಾರು, ಮಾರುತಿ ಓಮ್ನಿ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಜ.24 ರಂದು ಟಾಟಾ ಇಂಡಿಕಾ ಕಾರಿನಲ್ಲಿ ಬಂದ ದರೋಡೆಕೋರರು ನಗರದ ಬಿ.ಎಚ್. ರಸ್ತೆಯ ಗುಬ್ಬಿಗೇಟ್ ನಲ್ಲಿರುವ ಕರ್ಣಾಟಕ ಬ್ಯಾಂಕ್‌ಗೆ ಸೇರಿದ ಎಟಿಎಂಗೆ ನುಗ್ಗಿ, ಸೆಕ್ಯೂರಿಟಿ ಗಾರ್ಡ್ ನನ್ನು ಕಟ್ಟಿ ಹಾಕಿ, 2.50 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಮಾತ್ರವಲ್ಲ ಸಿಸಿ ಕ್ಯಾಮರಾಗಳನ್ನ ನಾಶ ಮಾಡಿ ಸುಳಿವು ಸಿಗದಂತೆ ಹಣ ದೋಚಿದ್ದರು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಮಾರ್ಗದರ್ಶನದಂತೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು.

ಬೆಂಗಳೂರಿನಿಂದ ನುರಿತ ತಂತ್ರಜ್ಞರನ್ನ  ಕರೆತಂದು ತಪಾಸಣೆ ಮಾಡಿಸಲಾಗಿತ್ತು. ಎಸ್ಪಿ ಇಶಾಪಂತ್ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಎರಡು ತಿಂಗಳಿಂದ ದರೋಡೆಕೋರರ ಬಂಧನಕ್ಕೆ ರಾಜ್ಯದ ವಿವಿಧ ಕಡೆ ತೀವ್ರ ತಪಾಸಣೆ ಕೈಗೊಂಡಿದ್ದರು. ಆದರೆ ತನಿಖಾ ತಂಡಕ್ಕೆ ಯಾವುದೆ ಸುಳಿವು ಸಿಕ್ಕಿರಲಿಲ್ಲ. ತುರುವೇಕೆರೆಯ ಪಟ್ಟಣದಲ್ಲಿ ರಾತ್ರಿ 11 ಗಂಟೆಯ ಸುಮಾರಿಗೆ ಎಟಿಎಂ ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ಗಸ್ತಿನಲ್ಲಿ ಇದ್ದ ಪೋಲಿಸ್ ಪೇದೆ ಆರೋಪಿಗಳು ಅನುಮಾನಸ್ಪದವಾಗಿ ಓಡಾಡುತ್ತಿದ್ದನ್ನು ಗಮನಿಸಿ ಪ್ರಶ್ನಿಸಿದಾಗ ಪೇದೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೆ ಪೇದೆ ಸ್ವಲ್ಪ ದೂರ ಹೋಗಿ ಗಸ್ತಿನಲ್ಲಿದ್ದ ಉಳಿದ ಪೋಲಿಸರನ್ನು ಕರೆಸಿಕೊಂಡು ನಾಲ್ಕು ಜನರನ್ನು ವಶಕ್ಕೆ ಪಡೆದ ನಂತರ ಕಾರನ್ನು ಪರಿಶೀಲನೆ ನಡೆಸಿದ್ದಾರೆ.

ಅದರಲ್ಲಿ ಕಬ್ಬಿಣ ಕಟ್ ಮಾಡುವ ಕಟ್ಟರ್, ಲಾಂಗ್ ಪತ್ತೆಯಾಗಿದ್ದವು. ಕೂಡಲೆ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಎಟಿಎಂ ದರೋಡೆಯ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ತುರುವೇಕೆರೆ ಸಿಪಿಐ ರಾಮಚಂದ್ರ ನೇತೃತ್ವದ ತಂಡ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತುರುವೇಕೆರೆ ತಾಲೂಕಿನ ಹೂಡಿಗೆರೆ, ಎಲೆರಾಂಪುರ, ತುಮಕೂರು ನಗರದ ಹನುಮಂತಪುರದಲ್ಲಿ ಎಟಿಎಂ ದರೋಡೆಗೆ ವಿಫಲಯತ್ನ ನಡೆಸಿದ್ದಾಗಿ ತಿಳಿಸಿದ್ದು, ಗುಬ್ಬಿಗೇಟ್ ಕರ್ಣಾಟಕ ಬ್ಯಾಂಕ್ ಎಟಿಎಂ ದರೋಡೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ವಿಚಾರಣೆ ವೇಳೆ ಎಟಿಎಂ ಕೀ ಓಪನ್ ಆಗಿತ್ತು ಎಂಬ ಮಾಹಿತಿಯನ್ನ ಆರೋಪಿಗಳು ತಿಳಿಸಿದ್ದು, ಎಟಿಎಂಗೆ ಹಣ ತುಂಬುವ ಸಿಬ್ಬಂದಿಯೂ ಇವರೊಂದಿಗೆ ಶಾಮೀಲಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಆರೋಪಿಗಳ ವಿಚಾರಣೆ ಇನ್ನೂ ಮುಂದುವರೆದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತುರುವೇಕೆರೆ ಇನ್‌ಸ್ಪೆಕ್ಟರ್ ರಾಮಚಂದ್ರಪ್ಪ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News