"ಇಸ್ಲಾಮಿಕ್ ಭಯೋತ್ಪಾದನೆ" ಜಗತ್ತಿನ ಮಹಾಭಯೋತ್ಪಾದಕ ಅಮೇರಿಕಾದ ಸೃಷ್ಟಿ: ಡಾ.ರಾಮ್ ಪುನಿಯಾನಿ
ಭಟ್ಕಳ, ಎ.17: ದೇಶದಲ್ಲಿ ಕೋಮುಗಲಭೆಗಳನ್ನು ಹುಟ್ಟುಹಾಕುವುದರ ಮೂಲಕ ಫ್ಯಾಸಿಷ್ಟ್ ಶಕ್ತಿಗಳು ಅಧಿಕಾರವನ್ನು ಗಳಿಸಿಕೊಂಡಿವೆ. ಭಯೋತ್ಪಾದಕ ದಾಳಿಗಳಲ್ಲಿ ನಷ್ಟ ಯಾರಿಗಾಗುತ್ತಿದೆ ಎನ್ನುವುದು ಜಗಜ್ಜಾಹೀರಾಗಿದ್ದು, "ಇಸ್ಲಾಮಿಕ್ ಭಯೋತ್ಪಾದನೆ" ಎನ್ನುವುದು ಜಗತ್ತಿನ ಮಹಾಭಯೋತ್ಪಾದಕ ರಾಷ್ಟ್ರ ಅಮೇರಿಕಾದ ಸೃಷ್ಟಿಯೇ ಹೊರತು ಮುಸ್ಲಿಮರು ಯಾವುದೇ ಕಾರಣಕ್ಕೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ. ಒಂದು ಜೀವಿಯನ್ನು ವಿನಾಕಾರಣ ಬಲಿ ತೆಗೆದುಕೊಂಡರೆ ಇಡೀ ಸಮುದಾಯವನ್ನು ಬಲಿ ತೆಗೆದುಕೊಂಡಂತೆ ಎಂದು ಕುರ್ ಆನ್ ಹೇಳುತ್ತದೆ ಎಂದು ಇಂದಿರಾಗಾಂಧಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಾಗೂ ಮಾನವ ಹಕ್ಕು ಹೋರಾಟಗಾರ ಐ.ಐ.ಎಂ. ಮುಂಬೈ ಇದರ ವಿಶ್ರಾಂತ ಪ್ರಾಧ್ಯಾಪಕ ಡಾ.ರಾಮ್ ಪುನಿಯಾನಿ ಹೇಳಿದರು
ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ನವಾಯತ್ ಕಾಲನಿಯ ತಂಝೀಮ್ ಮೈದಾನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸಿ, ಬಾಂಬ್ ಗಳನ್ನು ಸ್ಫೋಟಿಸಿ ಅಧಿಕಾರ ಪಡೆಯಲಾಗುತ್ತದೆ. ಎಲ್ಲೆಲ್ಲಿ ಗಲಭೆಗಳು ನಡೆದವೋ ಅಲ್ಲಿ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆಯಲ್ಲಿ ರಾರಾಜಿಸಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸುವುದು, ಅಲ್ಲಿನ ಪೆಟ್ರೋಲ್, ಡಿಸೇಲ್ ಬಾವಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಮಹತ್ಕಾಂಕ್ಷೆಯಿಂದಾಗಿ ಅಮೇರಿಕಾ ಭಯೋತ್ಪಾದಕರನ್ನು ಸೃಷ್ಟಿಸಿದೆ. ಇಸ್ಲಾಮ್ ಹಾಗೂ ಮುಸ್ಲಿಮರ ಕುರಿತಂತೆ ಇಂದಿಗೂ ಬಹಳಷ್ಟು ತಪ್ಪುಕಲ್ಪನೆಗಳಿವೆ. ಮುಂಬರುವ ದಿನಗಳು ಭಾರತೀಯ ಸಂವಿಧಾನದ ಅಳಿವು ಉಳಿವಿನ ನಿರ್ಣಾಯಕ ದಿನಗಳಾಗಿವೆ. ಮನುವಾದಿಗಳು ಈ ದೇಶದ ಸಂವಿಧಾನವನ್ನು ತಿರುಚುವ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ ಎಂದ ಅವರು, ಸಮಾಜದಲ್ಲಿ ದ್ವೇಷ, ವೈಷಮ್ಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಹಿಂದೂ ಮುಸ್ಲಿಮರಲ್ಲಿ ಶತ್ರುತ್ವದ ಬೀಜವನ್ನು ಬಿತ್ತುವ ವ್ಯವಸ್ಥಿತ ಷಡ್ಯಂತ್ರವನ್ನು ರಚಿಸಲಾಗುತ್ತಿದೆ ಎಂದರು.
ಕರ್ನಾಟಕ ಮುಸ್ಲಿಮ್ಸ್ ನ ಸಂಪಾದಕ ಸೈಯದ್ ತನ್ವೀರ್ ಆಹ್ಮದ್ ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಸಮುದಾಯ ಹಲವು ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದೆ. ಫ್ಯಾಸಿಷ್ಟರು ತಮ್ಮ ಶಕ್ತಿ ಮೀರಿ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಖೈರೆ ಉಮ್ಮತ್(ಉತ್ತಮ ಸಮುದಾಯ) ಎಂಬ ನೆಲೆಯಲ್ಲಿ ನಾವು ಈ ದೇಶವನ್ನು ಉಳಿಸಬೇಕಾಗಿದೆ. ಜಾತಿ, ಮತ, ಧರ್ಮವನ್ನು ಬದಿಗಿಟ್ಟು ರಾಷ್ಟ್ರದ ಒಳಿತಿಗಾಗಿ, ಜಾತ್ಯಾತೀತ ಶಕ್ತಿಗಳ ಕೈ ಬಲಪಡಿಸಬೇಕಾಗಿದೆ ಎಂದು ಕರೆ ನೀಡಿದರು.
ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ಅಬುಲ್ ಹಸನ್ ಅಲಿ ಇಸ್ಲಾಮಿಕ್ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝೀಯಾ, ಶಾಹಿದ್ ಹಾಷಿಮ್ ಮಾತನಾಡಿದರು.
ಮೌಲಾನಾ ಮುಹಮ್ಮದ್ ಇರ್ಫಾನ್ ನದ್ವಿ ಕಾರ್ಯಕ್ರಮ ನಿರೂಪಿಸಿದರು. ನಹಝಾನ್ ಇಕ್ಕೆರಿ ಸ್ವಾಗತಿಸಿದರು. ಮುಹಮ್ಮದ್ ಜಾವೀದ್ ಅರ್ಮಾರ್ ಪ್ರಸ್ತಾವಿಕವಾಗಿ ಮತನಾಡಿದರು. ಮುಬಷ್ಶಿರ್ ಹಲ್ಲಾರೆ ವಂದಿಸಿದರು.