ಸಾಕಾನೆ ದಾಳಿಗೆ ಮಾವುತ ಬಲಿ
ಮಡಿಕೇರಿ, ಎ.17: ಸಾಕಾನೆಯೊಂದರ ದಾಳಿಗೆ ಸಿಲುಕಿ ಮಾವುತನೊಬ್ಬ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ದುಬಾರೆಯ ಸಾಕಾನೆ ಶಿಬಿರದಲ್ಲಿ ನಡೆದಿದೆ.
ಸಾಕಾನೆ ಶಿಬಿರದಲ್ಲಿ ಮಾವುತನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಣ್ಣು (48) ಎಂಬವರು ಮೃತಪಟ್ಟಿದ್ದು, ಕಾರ್ಮಿಕ ಚಂದ್ರ (28) ಎಂಬವರು ಗಾಯಗೊಂಡಿದ್ದಾರೆ.
ಶಿಬಿರದಲ್ಲಿರುವ ರಂಜನ್ ಎಂಬ ಸಾಕಾನೆಯ ಮಾವುತನಾಗಿ ಅಣ್ಣು ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಸಾಕಾನೆ ರಂಜನ್‌ನನ್ನು ಕಟ್ಟಿದ ಜಾಗದಿಂದ ಬಿಚ್ಚುತ್ತಿರುವ ಸಂದರ್ಭ ಸಮೀಪದಲ್ಲೇ ಇದ್ದ 8 ವರ್ಷ ಪ್ರಾಯದ ಕಾರ್ತಿಕ್ ಎಂಬ ಸಾಕಾನೆ ಅಣ್ಣು ಮತ್ತು ಚಂದ್ರನ ಮೇಲೆ ದಾಳಿ ನಡೆಸಿತ್ತು. ಸಾಕಾನೆ ಕಾರ್ತಿಕ್ ತಿವಿತದಿಂದ ಅಣ್ಣುವಿನ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿ, ಅವರನ್ನು ಸಿದ್ದಾಪುರ ಸಮುದಾಯ ಕೇಂದ್ರಕ್ಕೆ ಸಾಗಿಸುವ ಸಂದರ್ಭ ಸಾವನ್ನಪ್ಪಿದ್ದಾರೆ. ಇದೇ ಸಂದರ್ಭ ಸಾಕಾನೆ ಕಾರ್ತಿಕ್ ಅಲ್ಲೇ ಸಮೀಪದಲ್ಲಿದ್ದ ಕಾರ್ಮಿಕ ಚಂದ್ರನ ಮೇಲೆಯೂ ದಾಳಿ ನಡೆಸಿತು. ಇದರಿಂದ ಅವರ ಕಾಲು ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿದೆ.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತ ಅಣ್ಣು ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗಾಯಾಳು ಚಂದ್ರರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದಾಪುರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಡಿಎಫ್ ಒ ಸೂರ್ಯಸೇನ್, ಆರ್‌ಎಫ್‌ಒ ನೆಹರು, ಉಪ ವಲಯ ಅರಣ್ಯಾಧಿಕಾರಿ ರಂಜನ್ ಭೇಟಿ ನೀಡಿ ಪರಿಶೀಲಿಸಿದರು.