ರಾಷ್ಟ್ರೀಕೃತ-ಸಹಕಾರಿ ಬ್ಯಾಂಕ್‌ ಗಳಲ್ಲಿರುವ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಧರಣಿ

Update: 2017-04-17 18:07 GMT

ಶಿವಮೊಗ್ಗ, ಏ. 17: ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾಕ್ಕೆ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಧರಣಿ ನಡೆಸಿತು.

ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಕೆಲಸ ಮಾಡಲೆತ್ನಿಸುತ್ತಿವೆ. ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಕೆಲಸ ನಡೆಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವುದನ್ನು ನಿಲ್ಲಿಸಿ, ರೈತರ ಸಾಲ ಮನ್ನಾಕ್ಕೆ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಪರಿಹಾರ ಹೆಚ್ಚಿಸಿ: ಬರಪೀಡಿತ ಪ್ರದೇಶಗಳ ರೈತರಿಗೆ ತಲಾ ಹೆಕ್ಟೇರ್‌ಗೆ 6,800 ರೂ. ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಇದು ಅತ್ಯಂತ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಕ್ಟೇರ್‌ಗೆ ಕನಿಷ್ಠ 20 ಸಾವಿರ ರೂ.ಗಳಾದರೂ ಬೆಳೆ ಪರಿಹಾರ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಹಿರೇಹಳ್ಳದಿಂದ ಹಿಟ್ಟೂರು, ನಾರಾಯಣಪುರ ಗ್ರಾಮಕ್ಕೆ ಮತ್ತು ಕಾಚಿನಕಟ್ಟೆ ಕೆರೆಗೆ ಏತ ನೀರಾವರಿ ಮೂಲಕ ನೀರು ತುಂಬಿಸಬೇಕು. ತುಂಗಾ ಏತ ನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಘೋಷಿಸಬೇಕು. ಉದ್ದಿಮೆದಾರರಿಗೆ ಸಾಲ ಮನ್ನಾ ಮಾಡಿರುವಂತೆ ರೈತರಿಗೂ ಈ ಯೋಜನೆಯನ್ನು ಜಾರಿ ಮಾಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದ್ದಾರೆ.

ಬರಗಾಲದ ಹಿನ್ನೆಲೆಯಲ್ಲಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳು ಸಾಲ ವಸೂಲಿ ಮಾಡಬಾರದೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಈ ಸುತ್ತೋಲೆ ನಿರ್ಲಕ್ಷಿಸಿ ಕೆಲ ಬ್ಯಾಂಕುಗಳು ಸಾಲ ವಸೂಲಿ ಮುಂದುವರೆಸಿವೆ. ಇದರಿಂದ ಕಂಗಾಲಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ತಕ್ಷಣವೇ ಇಂತಹ ಬ್ಯಾಂಕ್‌ಗಳ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಯಿತು.

ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಮುಖಂಡರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಮಂಜಪ್ಪ, ಕೆ.ರಾಘವೆಂದ್ರ, ಎಸ್.ಶಿವಮೂರ್ತಿ, ಚೇತನ್ ಸೇರಿದಂತೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News