ದಾವಣಗೆರೆ: ನಗರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ

Update: 2017-04-17 18:16 GMT

ದಾವಣಗೆರೆ, ಎ.17: ಮಹಾನಗರ ಪಾಲಿಕೆ ಆವರಣದಲ್ಲಿ ಸೋಮವಾರ ನಗರಾಭಿವೃದ್ಧಿ ಮತ್ತು ವಕ್ಫ್ ಸಚಿವ ಆರ್. ರೋಷನ್ ಬೇಗ್ ಅವರ ಅಧ್ಯಕ್ಷತೆಯಲ್ಲಿ ನಗರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಚಿವ ರೋಷನ್ ಬೇಗ್ ಮಾತನಾಡಿ, ನಗರದಲ್ಲಿ ಸರಕಾರಿ, ಖಾಸಗಿ ಲೇಔಟ್ ಎಷ್ಟಿವೆ, ಮಂಜೂರಾತಿ ಸಿಕ್ಕ ಬಡಾವಣೆಯೆಷ್ಟು, ಅನಧಿಕೃತ ಲೇಔಟ್‌ಗಳೆಷ್ಟು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಇಲಾಖೆ ಆಯುಕ್ತರಿಗೆ ಆದೇಶಿಸಿದರು.

ನಂತರ ಮಾತನಾಡಿದ ಅವರು, ನಗರದ ಲೇಔಟ್‌ಗಳ ಬಗ್ಗೆ ಪಾಲಿಕೆ ಆಯುಕ್ತ 3 ಸಾವಿರ ಎಕರೆ ಎಂದರೆ, ದೂಡಾ ಆಯುಕ್ತ 500 ಎಕರೆ ಲೇಔಟ್ ಎನ್ನುತ್ತಿದ್ದಾರೆ. ಹಾಗಾದರೆ, ನಿಜವಾಗಿಯೂ ಎಷ್ಟು ಲೇಔಟ್‌ಗಳಿವೆ? ಎಂಬ ಬಗ್ಗೆ ತನಿಖೆಯಾಗಲಿ ಎಂದು ಹೇಳಿದರು. 

ಪಾಲಿಕೆ ಸಿಪಿಐ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್ ಮಾತನಾಡಿ, ತಮ್ಮ ವಾರ್ಡ್‌ನ ಉತ್ತಮ ಚಂದ್ ಲೇಔಟ್‌ನಲ್ಲಿ ಮೂಲ ಸೌಕರ್ಯವಿಲ್ಲ. 60-70 ಮನೆ ಇದ್ದು, ಒಳ ಚರಂಡಿ, ನೀರು, ಪಾರ್ಕ್ ಹೀಗೆ ಮೂಲ ಸೌಕರ್ಯ ಕಲ್ಪಿಸದೆ, ಲೇಔಟ್‌ಗೆ ಅನುಮೋದನೆ ನೀಡಿದ್ದು ಹೇಗೆಂದು? ಪ್ರಶ್ನಿಸಿದರು. ಇದಕ್ಕೆ ದೂಡಾ ಆಯುಕ್ತ ಆದಪ್ಪ ಮಾತನಾಡಿ, 149 ಪಾರ್ಕ್‌ಗೆ ಸೌಕರ್ಯ ಕಲ್ಪಿಸಿ, ಪಾಲಿಕೆಗೆ ಹಸ್ತಾಂತರಿಸಿದೆ. ಸುಮಾರು 160 ಖಾಸಗಿ ಲೇಔಟ್ ನಗರದಲ್ಲಿವೆ. ಅತ್ಯಾಧುನಿಕ ವಿದ್ಯುದೀಪ ಅಳವಡಿಸಲು ಅನುದಾನ ಒದಗಿಸಿದೆ. ರಿಂಗ್‌ರಸ್ತೆಗೆ ರೈಲ್ವೆ ಮೇಲ್ಸೇತುವೆ ದೂಡಾ ಬಳಿ ನಿರ್ಮಾಣವಾಗಿದ್ದು, ಅಲ್ಲಿ ರಸ್ತೆ ಕಾಮಗಾರಿ ಬಾಕಿ ಇದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶ್ರವಣ್ ಅನಿರುದ್ಧ ಮಾತನಾಡಿ, ತಾಂತ್ರಿಕ ಕಾರಣಕ್ಕೆ ಸ್ಮಾರ್ಟ್ ಸಿಟಿ ಕೆಲಸ ಆರಂವಾಗಿಲ್ಲ. 394 ಕೋಟಿ ಅನುದಾನ ಬಂದಿದ್ದು, ಮಂಡಿಪೇಟೆ ಪ್ರದೇಶದ 4 ರಸ್ತೆ, ಮಂಡಕ್ಕಿ ಟ್ಟಿಗಳಿಗೆ ಹೈಟೆಕ್ ಸ್ಪರ್ಶ, ಕೌಶಳ್ಯ ತರಬೇತಿ ನೀಡುವುದೂ ಸೇರಿದಂತೆ ಯೋಜನೆ ರೂಪಿಸಿದ್ದೇವೆ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೂ ಒತ್ತು ನೀಡುತ್ತೇವೆ ಎಂದರು.

ಹಂದಿ, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿರುವ, ಸ್ವಚ್ಛತೆಯೇ ಇಲ್ಲದಿರುವ, 8-10 ದಿನಕ್ಕೊಮ್ಮೆ ನೀರು ಬಿಡುವ, ಬಯಲು ಬಹಿರ್ದೆಸೆಗೆ ಜನ ಹೋಗುತ್ತಿದ್ದರೆ ದಾವಣಗೆರೆ ಸ್ಮಾರ್ಟ್ ಸಿಟಿ ಎನಿಸಿಕೊಳ್ಳುವುದಾದರೂ ಹೇಗೆ ಸಾಧ್ಯ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಸ್ಮಾರ್ಟ್ ಸಿಟಿಯೆಂದರೆ ವಿದ್ಯುತ್ ಮಾರ್ಗ, ದೂರ ಸಂಪರ್ಕ ಕೇಬಲ್ ಕಾಣದಂತಿರಬೇಕು. ಕಸದ ತೊಟ್ಟಿ, ಕಸದ ರಾಶಿ ಕಾಣಬಾರದು. ಆದರೆ, ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಜಲಸಿರಿಯಡಿ 480 ಕೋಟಿ ರೂ. ಯೋಜನೆ ರೂಪಿಸಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಸಚಿವ ಸಂಪುಟದ ಅನುಮತಿ ಸಿಗಬೇಕು. ತುಂಗಭದ್ರಾ ನದಿಯಲ್ಲಿ ಬ್ಯಾರೇಜ್ ನಿರ್ಮಾಣಕ್ಕೂ ಅನುದಾನ ಒದಗಿಸುವಂತೆ ಒತ್ತಾಯಿಸಿದರು.

ಸುಮಾರು 250 ಕೋಟಿ ವೆಚ್ಚದಲ್ಲಿ 180 ಕಿ.ಮೀ. ಸಿಸಿ ರಸ್ತೆ ಕಾಮಗಾರಿ ಕೈಗೊಂಡಿದ್ದೇವೆ. ಪಾಲಿಕೆ ಕೇವಲ 354 ಕೋಟಿ ನೀಡಿದ್ದು, ತಮ್ಮ ಅನುದಾನ ಬಳಸಿಕೊಂಡು ಕಾಮಗಾರಿ ಕೈಗೊಳ್ಳಲಾಗಿದೆ. ಅಮೃತ್ ಯೋಜನೆ, ಸ್ಮಾಟ್ ಸಿಟಿ ಯೋಜನೆಯಡಿ ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳಬೇಕಾಗಿದೆ ಎಂದರು.

ಸಚಿವ ರೋಷನ್ ಬೇಗ್ ಮಾತನಾಡಿ, ಒಳ ಚರಂಡಿ ನಿರ್ಮಾಣಕ್ಕೆ 32.5 ಕೋಟಿ ರೂ. ಮೀಸಲಿಟ್ಟಿದ್ದು, ಕಾಮಗಾರಿ ಕೈಗೊಳ್ಳದ ಗುತ್ತಿಗೆದಾರನ ವಿರುದ್ಧ ತಮ್ಮ ಇಲಾಖೆಗೆ ಪತ್ರ ಬರೆದು ಕೈತೊಳೆದುಕೊಂಡರೇ ಮುಗಿಯಿತೇ? ಪತ್ರ ಬರೆದಿದ್ದೀವೆಂದು ನಾಟಕ ಮಾಡುತ್ತಿದ್ದೀರಾ? ಇಷ್ಟು ತಿಂಗಳಾದರೂ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸದ ಪಾಲಿಕೆ ಇಇ ವಿರುದ್ಧ ಹರಿಹಾಯ್ದ ಅವರು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರ ಸಭೆ ನಡೆಸಿ, ಮತ್ತೆ ದಾವಣಗೆರೆಗೆ ಬಂದು ಸ್ಥಳ ಪರಿಶೀಲಿಸುತ್ತೇನೆ. ಅಷ್ಟರಲ್ಲಿ ಆಗಬೇಕಾದ ಕೆಲಸ ಆಗಿರಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News