×
Ad

ಮೇ 5ರಂದು "ಮರಳಿ ಮನೆಗೆ" ಚಲನಚಿತ್ರ ಬಿಡುಗಡೆ

Update: 2017-04-18 17:43 IST

ಮಡಿಕೇರಿ, ಎ.18: ನಿಖಿಲ್ ಹೋಂ ಸ್ಕ್ರೀನ್ ನಿರ್ಮಾಣದ "ಮರಳಿ ಮನೆಗೆ" ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಮೇ 5ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಯೋಗೇಶ್ ಮಾಸ್ಟರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ನಟಿ ಶ್ರುತಿ ಅವರ ಭಾವನಾತ್ಮಕ ಚಿತ್ರಗಳ ಸರಣಿಗೆ ಈ ಚಿತ್ರ ಮತ್ತೊಂದು ಪ್ರವೇಶವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

"ಮರಳಿ ಮನೆಗೆ" ಚಿತ್ರದ ಕಥೆ ತನ್ನ ಮರಳಿ ಮನೆಗೆ ಕಾದಂಬರಿ ಆಧಾರಿತವಾಗಿದ್ದು, ಸಂಭಾಷಣೆ, ಸಾಹಿತ್ಯ, ಸಂಗೀತ ನಿರ್ದೇಶನ ಮತ್ತು ಚಿತ್ರ ನಿರ್ದೇಶನ ತಾವೇ ಮಾಡಿದ್ದು, ಶ್ರುತಿ, ಶಂಕರ್ ಆರ್ಯನ್, ಸಹನಾ, ಸುಚೇಂದ್ರ ಪ್ರಸಾದ್, ಅರುಂಧತಿ ಜಟ್ಕರ್, ರೋಹಿತ್ ನಾಗೇಶ್ ನಟಿಸಿದ್ದಾರೆ. ವಿಶೇಷ ಪಾತ್ರಗಳಲ್ಲಿ ಅನಿರುದ್ಧ ಜಟ್ಕರ್ ನಟಿಸಿದ್ದು, ಪತ್ರಕರ್ತೆ ಗೌರಿ ಲಂಕೇಶ್ ಇದೇ ಪ್ರಥಮ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ ಎಂದು ತಿಳಿಸಿದರು.

ಮೈಸೂರಿನ ರಂಗಭೂಮಿ ಹಿನ್ನೆಲೆಯ ಸುಖದೇವ್ ತೇಜಸ್ವಿ ಮತ್ತು ಬಾಲ ಭರತ ನಾಟ್ಯ ಪ್ರತಿಭೆ ಅನನ್ಯ ಬಾಲ ಕಲಾವಿದರಾಗಿ ನಟಿಸಿದ್ದು, ತಿಪಟೂರು, ದಂಡಿನ ಶಿವರ, ಅಮ್ಮಸಂದ್ರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಸುಭಾಷ್ ಎಲ್. ಗೌಡ ಮತ್ತು ಎಸ್.ಎನ್.ಲಿಂಗೇಗೌಡ ಚಿತ್ರವನ್ನು ನಿರ್ಮಿಸಿದ್ದು, ಗೀತೆಗಳಿಗೆ ಪ್ರಧಾನ ಸ್ಥಾನವಿರುವ ಈ ಚಿತ್ರದಲ್ಲಿ ಮೇಘನಾ ವೆಂಕಟೇಶ್, ಚೇತನ್ ಸೋಸ್ಕ, ಮುನಿರಾಜು, ಶ್ವೇತಾ ಪ್ರಭು ಹಾಗೂ ರಘುನಂದನ ಭಟ್ ಹಿನ್ನೆಲೆ ಗಾಯಕರಾಗಿದ್ದಾರೆ.

ಮರಾಠಿ ಕುಟುಂಬವೊಂದರ ಕಥೆ ಪ್ರಧಾನವಾಗಿರುವ ಈ ಚಿತ್ರದಲ್ಲಿ ಮರಾಠಿ ಭಾಷೆಯ ಪ್ರಯೋಗವೂ ಇದ್ದು, ಅದಕ್ಕೆ ಕನ್ನಡದ ಉಪ ಶೀರ್ಷಿಕೆಗಳನ್ನು ನೀಡಲಾಗಿದೆ. ಸಮಾಜದ ಮೊದಲ ಮತ್ತು ಅತಿ ಚಿಕ್ಕ ಘಟಕವಾದ ಕೌಟುಂಬಿಕ ಮೌಲ್ಯಗಳನ್ನು ಕೇಂದ್ರೀಕರಿಸುವ ಈ ಚಲನಚಿತ್ರ, ಕುಟುಂಬಗಳು ಒಡೆದು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಅಗತ್ಯವಾಗಿದೆ. ಕೌಟುಂಬಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಈ ಚಿತ್ರ ಒಳಗೊಂಡಿದ್ದು, ಲಂಡನ್, ಕೆನಡಾ, ಲಾಸ್ ಏಂಜಲಿಸ್, ಪ್ರಯಾಗ, ಪೂನಾ ಮೊದಲಾದ ಕಡೆ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ ಎಂದು ಹೇಳಿದರು.

ಚಲನಚಿತ್ರದ ಕಥೆ 80ರ ದಶಕದ್ದಾಗಿದ್ದು, ಹೆಚ್ಚಿನ ಆಧುನಿಕ ತಂತ್ರಜ್ಞಾನದ ಶೈಲಿಗಳಿಗೆ ಹೊರತಾಗಿ ಚಿತ್ರವನ್ನು ಸಾಧ್ಯವಾದಷ್ಟು ಅದೇ ಶೈಲಿಯಲ್ಲಿ ಕಟ್ಟಿಕೊಡಲು ಯತ್ನಿಸಲಾಗಿದೆ. ಒಂದು ಹಳೆಯ ಚಿತ್ರವನ್ನು ಮತ್ತೆ ಹೊಸದಾಗಿ ನೋಡಿಸುವ ಪ್ರಯತ್ನದಂತಿದೆ ಎಂದು ಯೋಗೇಶ್ ಮಾಸ್ಟರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರನಟ ಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News