ಕುಡಿಯುವ ನೀರಿನ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಿ: ಸಿಇಒ ಚಾರುಲತಾ ಸೋಮಲ್ ಸೂಚನೆ
ಮಡಿಕೇರಿ, ಎ.18: ಜಿಲ್ಲೆಯ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಾರ್ಮಾಡು ಇತರೆ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕೇಳಿಬರುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು. ಕುಡಿಯುವ ನೀರು ವ್ಯತ್ಯಯ ಕಂಡುಬಂದರೆ ಕೂಡಲೇ ಅಗತ್ಯ ಕ್ರಮವಹಿಸಬೇಕು. ಹಾಗೆಯೇ ಜಾನುವಾರುಗಳಿಗೆ ಮೇವು ಕೊರತೆ ಕಂಡುಬರದಂತೆ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದರು.
ಕುಡಿಯುವ ನೀರು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭೌತಿಕ ಪ್ರಗತಿ ಸಾಧಿಸಲಾಗಿದೆ. ಆದರೆ ಆರ್ಥಿಕ ಪ್ರಗತಿ ಆಗಿರುವುದಿಲ್ಲ. ಆದ್ದರಿಂದ ಈ ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಅರ್ಥಿಕ ಪ್ರಗತಿ ಸಾಧಿಸಿದಾಗ ಮಾತ್ರ ಹೆಚ್ಚಿನ ಅನುದಾನ ದೊರೆಯಲು ಸಾಧ್ಯ ಎಂದವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಬಗ್ಗೆ ದೂರುಗಳು ಬರದಂತೆ ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿ.ಪಂ.ಎಂಜಿನಿಯರ್ ರಾಜಕುಮಾರ್ ರೆಡ್ಡಿ, ಸೆಸ್ಕ್ ಇಇ ಸೋಮಶೇಖರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಅಹ್ಮದ್, ಪೌರಾಯುಕ್ತರಾದ ಬಿ.ಶುಭಾ, ತಹಶೀಲ್ದಾರರಾದ ಕುಸುಮ, ಕೃಷ್ಣ, ತಾ.ಪಂ.ಇಒಗಳಾದ ಪಡ್ನೇಕರ್, ಜೀವನ್ ಕುಮಾರ್, ಸತ್ಯನಾರಾಯಣ, ಜಿ.ಪಂ.ಎಇಇಗಳು ಇತರರು ಹಾಜರಿದ್ದರು.