ದರೋಡೆ ಸಂಚು : ಐವರು ಆರೋಪಿಗಳ ಬಂಧನ
ಮಡಿಕೇರಿ,ಎ.18: ಜಿಲ್ಲೆಯ ವಿವಿಧೆಡೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಕುಶಾಲನಗರದಲ್ಲಿ ದರೊಡೆ ಯತ್ನದಲ್ಲಿ ತೊಡಗಿದ್ದ ಸಂದರ್ಭ ಪೊಲೀಸರ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ಒಂದು ಆಟೊ ರಿಕ್ಷಾ ಹಾಗೂ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಸೋಮವಾರಪೇಟೆಯ ಗಾಂಧಿ ನಗರದ ನಿವಾಸಿಗಳಾದ ಸಂಜಯ್ ಕುಮಾರ್, ಪಿ.ಕೆ. ರವಿ, ಎ. ಇಸ್ಮಾಯೀಲ್, ಚೌಡ್ಲು ಗ್ರಾಮದ ಸಿ.ಎಸ್. ಸುದೇವ ಹಾಗೂ ಹಾನಗಲ್ಲು ಗ್ರಾಮದ ಎನ್.ಸಿ. ಚಂದ್ರ ಎಂದು ಗುರುತಿಸಲಾಗಿದೆ.
ಎ.17 ರಂದು ರಾತ್ರಿ ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದ ಬಳಿ ಐವರು ಆರೋಪಿಗಳ ತಂಡ ಆಟೊ ರಿಕ್ಷಾದಲ್ಲಿ ಆಯುಧಗಳೊಂದಿಗೆ ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಪಿಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಆರೋಪಿಗಳ ಬಳಿಯಲ್ಲಿ ಇದ್ದ ಆಟೊ ರಿಕ್ಷಾ ಸೇರಿದಂತೆ ಎರಡು ಕಬ್ಬಿಣದ ಲಾಂಗ್‌ಗಳು, ಕಾಡು ಮರದ ದೊಣ್ಣೆಗಳು, ಹಗ್ಗ ಹಾಗೂ ಮೆಣಸಿನ ಪುಡಿಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರಮುಖ ಆರೋಪಿ ಸಂಜಯ್ ಕುಮಾರ್ ಜಿಲ್ಲೆಯ ವಿವಿಧೆಡೆ ಕಳ್ಳತನ ಪ್ರಕರರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ. ಉಳಿದ ಆರೋಪಿಗಳು ಇತರ ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಕುಶಾಲನಗರ ವಿಶೇಷ ಅಪರಾಧ ಪತ್ತೆ ದಳದ ಎಎಸ್‌ಐ ಗೋಪಾಲ್, ಸಿಬ್ಬಂದಿಗಳಾದ ಸಜಿ , ಸುದೀಶ್ ಕುಮಾರ್, ಸುರೇಶ್, ಮುಸ್ತಫಾ, ಉದಯ ಕುಮಾರ್, ಸಂಪತ್ ರೈ, ಅಜಿತ್, ಲೋಕೇಶ್, ಚಾಲಕರಾದ ಪ್ರವೀಣ್, ಗಣೇಶ್, ರಾಜೇಶ್ ಹಾಗೂ ಗಿರೀಶ್ ಪಾಲ್ಗೊಂಡಿದ್ದರು.
ಆರೋಪಿಗಳ ಬಳಿಯಿಂದ ಚಿನ್ನಾಭರಣ, ಬೆಳ್ಳಿಯ ಆಭರಣ, ಕರಿಮೆಣಸು ಸೇರಿದಂತೆ ಸುಮಾರು ರೂ.8.81 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.