ಮಾಗಡಿ: ಮೇಕೆಯನ್ನು ತಿಂದ ಚಿರತೆಗೆ ಬೆಂಕಿ ಹಚ್ಚಿ ಕೊಂದ ಗ್ರಾಮಸ್ಥರು
ದಾವಣಗೆರೆ, ಎ.18: ಊರಿಗೆ ನುಗ್ಗಿ ಮೇಕೆ ಮರಿಯನ್ನು ಹಿಡಿದೊಯ್ದ ಚಿರತೆಯನ್ನು ಗ್ರಾಮಸ್ಥರು ಬೆಂಕಿ ಹಚ್ಚಿ ಕೊಂದ ಘಟನೆ ಜಗಳೂರು ತಾಲೂಕಿನ ಮಡ್ರಹಳ್ಳಿ ಬಳಿಯ ಮಾಗಡಿ ಗ್ರಾಮದಲ್ಲಿ ನಡೆದಿದೆ.
ಮಾಗಡಿ ಸಮೀಪದ ರಂಗಯ್ಯನದುರ್ಗ ಮೀಸಲು ಅರಣ್ಯ ಪ್ರದೇಶದ ಬಳಿ ಚಿರತೆಯನ್ನು ಬೆಂಕಿ ಹಚ್ಚಿ ಕೊಲ್ಲಲಾಗಿದೆ. ಸೋಮವಾರ ರಾತ್ರಿ ಆಹಾರ ಅರಸಿಕೊಂಡು ಬಂದ ಚಿರತೆ ಗ್ರಾಮದಲ್ಲಿ ಮೇಕೆ ಮರಿಯೊಂದನ್ನು ಕಚ್ಚಿಕೊಂಡು ಹೋಗಿತ್ತು. ಮೇಕೆ ಮರಿಯನ್ನು ಚಿರತೆ ಎಳೆದೊಯ್ದ ವಿಷಯ ಗ್ರಾಮಸ್ಥರಿಗೆ ತಿಳಿಯಿತು. ಮೇಕೆಯನ್ನು ಹೊರ ವಲಯದ ಕೆರೆಯತ್ತ ಎಳೆದೊಯ್ದ ಚಿರತೆ ಕೆರೆಯ ತೂಬಿನಲ್ಲಿ ಅಡಗಿತ್ತು. ಮೇಕೆಯನ್ನು ತಿಂದು ನಿದ್ದೆ ಮಾಡುತ್ತಿದ್ದ ಚಿರತೆಯನ್ನು ಕಂಡ ಗ್ರಾಮಸ್ಥರು ತೂಬಿನ ಎರಡೂ ಬದಿಯನ್ನು ಮುಚ್ಚಿ ಹಾರೆ, ಮಚ್ಚುಗಳಿಂದ ಚಿರತೆಗೆ ತಿವಿದು, ನಂತರ ಪೆಟ್ರೋಲ್, ಡೀಸೆಲ್‌ನ್ನು ಚಿರತೆಯ ಮೇಲೆ ಸುರಿದು ಜೀವಂತವಾಗಿ ಬೆಂಕಿ ಹಚ್ಚಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಬೆಂಕಿಗಾಹುತಿಯಾದ ಚಿರತೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.