ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ: ದಿಗ್ವಿಜಯ್‌ಸಿಂಗ್
ಬೆಂಗಳೂರು, ಎ.18: ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೆ ಎದುರಿಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದಲ್ಲೆ ಚುನಾವಣೆಯನ್ನು ಎದುರಿಸಲಿದ್ದು, ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರೇ ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದರು.
ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ. ಪರಮೇಶ್ವರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಮತ್ತೊಬ್ಬರನ್ನು ಆ ಸ್ಥಾನಕ್ಕೆ ತರುವ ಕುರಿತು ಹೈಕಮಾಂಡ್ ಎದುರು ಯಾವುದೆ ಪ್ರಸ್ತಾಪವಿಲ್ಲ. ಯಾವುದೆ ಸ್ಪರ್ಧೆಯೂ ಇಲ್ಲ. ಸಚಿವ ಸಂಪುಟ ವಿಸ್ತರಣೆ ಹಾಗೂ ವಿಧಾನಪರಿಷತ್‌ಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವುದನ್ನು ಮುಖ್ಯಮಂತ್ರಿಯ ವಿವೇಚನೆಗೆ ಬಿಡಲಾಗಿದೆ ಎಂದು ದಿಗ್ವಿಜಯ್‌ಸಿಂಗ್ ಹೇಳಿದರು.
ವೀರಶೈವ-ಲಿಂಗಾಯತ ಸಮುದಾಯವು ಕಾಂಗ್ರೆಸ್ ಪಕ್ಷದೊಂದಿಗೆ ಇಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಅದನ್ನು ಸುಳ್ಳೆಂದು ಸಾಬೀತು ಮಾಡಿದೆ. ವೀರಶೈವ-ಲಿಂಗಾಯತ ಸಮುದಾಯದವರ ಪ್ರಾಬಲ್ಯವಿರುವಂತಹ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಎಂದರೆ ಕೆಲವು ನಿರ್ದಿಷ್ಟ ಜಾತಿಗಳನ್ನು ಓಲೈಸುವ ಪಕ್ಷ ಎಂಬ ಅಪಪ್ರಚಾರಕ್ಕೆ ತಕ್ಕ ಉತ್ತರ ಸಿಕ್ಕಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿ, ಸಚಿವರು, ಶಾಸಕರು, ಕಾರ್ಯಕರ್ತರಿಗೆ ಅಭಿನಂದಿಸುತ್ತೇನೆ. ಮತ್ತಷ್ಟು ಪರಿಶ್ರಮ ವಹಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತೇವೆ ಎಂದು ಅವರು ತಿಳಿಸಿದರು.
ನಾವು ಅಹಿಂದ ವರ್ಗಗಳ ಪರವಾಗಿಯಷ್ಟೇ ಅಲ್ಲ, ಎಲ್ಲ ವರ್ಗಗಳ ಪರವಾಗಿದ್ದೇವೆ. ಬಿಜೆಪಿ ಮಾತ್ರ ಬಲಿಷ್ಠರು, ಶೋಷಿತರ ನಡುವೆ ಒಡಕು ಮೂಡಿಸುವ ಯತ್ನ ಮಾಡುತ್ತಿದೆ. ಇದೇ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಯಲಿದೆ ಎಂದು ದಿಗ್ವಿಜಯ್‌ಸಿಂಗ್ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಭ್ರಷ್ಟಾಚಾರ ರಹಿತ, ಅಭಿವೃದ್ಧಿಪರ ಆಡಳಿತ ನೀಡುತ್ತಿದ್ದೇವೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದು ಅವರು ಕಿಡಿಕಾರಿದರು.
ರಾಜ್ಯದಲ್ಲಿ ತಲೆದೋರಿರುವ ಬರಪರಿಸ್ಥಿತಿಯನ್ನು ನಿರ್ವಹಿಸಲು ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದೇನೆ. ನಾನು ಸಹ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸುತ್ತೇನೆ ಎಂದು ದಿಗ್ವಿಜಯ್‌ಸಿಂಗ್ ಹೇಳಿದರು.