×
Ad

​ಗುಂಡ್ಲುಪೇಟೆ ತಾಲೂಕಿನಾದ್ಯಂತ ನೀರಿಗಾಗಿ ಹಾಹಾಕಾರ: ರೈತರು ಕಂಗಾಲು

Update: 2017-04-18 21:31 IST

ಗುಂಡ್ಲುಪೇಟೆ, ಎ.18: ದಿನೇ ದಿನೇ ಏರುತ್ತಿರುವ ಬಿಸಿಲಿನ ಬೇಗೆ, ನೀರಿಗಾಗಿ ಹಾಹಾಕಾರ, ಜಾನುವಾರುಗಳಿಗೆ ನೀರಿಲ್ಲ ಮೇವಿಲ್ಲ, ರೈತರು ಬೆಳೆದ ಬೆಳೆ ಕೈಕೊಟ್ಟಿದೆ, ಕೂಲಿ ಕಾರ್ಮಿಕರು ಕೂಲಿ ಸಿಗದೆ ವಲಸೆ ಹೋಗುತ್ತಿದ್ದಾರೆ.

ತಾಲೂಕಿನಾದ್ಯಂತ ಹಿಂದೆಂದೂ ಕಂಡು ಕೇಳರಿಯದೆ ಭೀಕರ ಜಲಕ್ಷಾಮ ಉಂಟಾಗಿದ್ದು, ಉರಿಬಿಸಿಲನ್ನೂ ಲೆಕ್ಕಿಸಿದೆ ರೈತರು ವ್ಯವಸಾಯ ನಂಬಿ ಜೀವನ ನಡೆಸುತ್ತಿದ್ದರೆ, ಕೂಲಿಕಾರ್ಮಿಕರು ಕೈಗೆ ಕೂಲಿ ಇಲ್ಲದೆ ಕೇರಳ, ಕೊಡಗಿನ ಕಡೆ ವಲಸೆ ಹೋಗುತ್ತಿದ್ದಾರೆ. ಭೂಮಿಯಲ್ಲಿನ ಜಲಮೂಲಗಳು ಒಣಗಿ ಹೋಗುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚುತ್ತಿದ್ದರೂ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸತತವಾಗಿ ಎರಡು ವರ್ಷಗಳಿಂದ ಕೈಕೊಟ್ಟ ಮಳೆಯಿಂದಾಗಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಕುಸಿತವುಂಟಾಗಿದ್ದು, ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದ್ದು, ಕುಡಿಯುವ ನೀರಿನ ಕೊರತೆಯಿಂದ ಜನ-ಜಾನುವಾರುಗಳು ಪರಿತಪಿಸುವಂತಾಗಿದೆ. ಕಬಿನಿಯಿಂದ ಪಟ್ಟಣಕ್ಕೆ ನೀರು ಸರಬರಾಜಾಗುವ ಮಾರ್ಗದ 28 ಗ್ರಾಮಗಳನ್ನು ಹೊರತು ಪಡಿಸಿ ಬೇರಾವುದೇ ಪ್ರದೇಶಕ್ಕೆ ನದಿ ನೀರು ಸರಬರಾಜಾಗುತ್ತಿಲ್ಲ. ತೆರಕಣಾಂಬಿ, ಶ್ಯಾನಡ್ರಹಳ್ಳಿ ಹಾಗೂ ಬಲಚವಾಡಿ ಗ್ರಾಮಗಳ ಕೆರೆಗಳಿಗೆ ನದಿ ನೀರು ತುಂಬಿಸಿದ ಪರಿಣಾಮವಾಗಿ ಈ ಗ್ರಾಮಗಳಲ್ಲಿ ನೀರಿನ ಕೊರತೆಯಾಗಿಲ್ಲ. ಇವುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳಲ್ಲಿಯೂ ನೀರಿಗಾಗಿ ಹಾಹಾಕಾರವುಂಟಾಗಿದೆ. ಅಲ್ಲದೆ ಕಳೆದ ತಿಂಗಳಿನಿಂದ ಪಟ್ಟಣಕ್ಕೂ ನೀರು ಸರಬರಾಜಾಗುತ್ತಿಲ್ಲ.

ಬಹಳ ದಿನಗಳಿಂದಲೂ ನೀರಿನ ಸಮಸ್ಯೆ ಎದುರಿಸುತ್ತಿರುವ ಶಿಂಡನಪುರ, ಚಿಕ್ಕತುಪ್ಪೂರು, ದೊಡ್ಡತುಪ್ಪೂರು, ಕಗ್ಗಳ, ಬೊಮ್ಮಲಾಪುರ, ವಡ್ಡಗೆರೆ, ಅಂಕಹಳ್ಳಿ, ಕೊಡಸೋಗೆ, ಬನ್ನಿತಾಳಪುರ, ಭೀಮನಬೀಡು, ಕೂತನೂರು, ಮಲ್ಲಯ್ಯನಪುರ, ಹಂಗಳ, ಮಗುವಿನಹಳ್ಳಿ, ಕಲಿಗೌಡನಹಳ್ಳಿ, ಹುಂಡೀಪುರ, ಬೇಗೂರು, ಮಡಹಳ್ಳಿ, ಸೋಮಹಳ್ಳಿ, ಶೀಗೆವಾಡಿ, ಚಿಕ್ಕಾಟಿ, ತೊಂಡವಾಡಿ, ಸೇರಿದಂತೆ ನೂರಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸಮಸ್ಯೆ ತೀವ್ರವಾಗಿದೆ.

ಮಳೆಯಾಶ್ರಿತ ಪ್ರದೇಶವಾದ ತಾಲೂಕಿನಲ್ಲಿ ಬಹುತೇಕ ಕೃಷಿ ಚುಟುಕಚಿಕೆ ಕುಂಠಿತಗೊಂಡಿದೆ. ನೀರಾವರಿ ಜಮೀನುಗಳಲ್ಲಿ ಅಂತರ್ಜಲ ಕುಸಿತ ಕಂಡಿರುವುದರಿಂದ ದೀರ್ಘಾವದಿ ಬೆಳೆಗಳಾದ ಕಬ್ಬು, ಹರಿಶಿನ, ಬಾಳೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ಬಹುಪಾಲು ವ್ಯವಸಾಯದ ಭೂಮಿಗಳು ಪಾಳು ಬಿದ್ದಿವೆ. ಇನ್ನು ಮಳೆಯಾಶ್ರಿತ ಅಲ್ಪಾವಧಿ ಬೆಳೆಗಳಾದ ಹತ್ತಿ, ಕಡಲೆ,ಜೋಳ, ಸೂರ್ಯಕಾಂತಿ ಬೆಳೆಬೆಳೆಯಲು ಸಾಧ್ಯವಾಗಿಲ್ಲ. ಬೆಳೆಗಳನ್ನು ನಂಬಿ ಬದುಕುತ್ತಿರುವ ರೈತರು ಬ್ಯಾಂಕುಗಳಲ್ಲಿ ಸಾಲ ಮಾಡಿ ಬೇಸಾಯದಲ್ಲಿ ತೊಡಗಿದ್ದರು ಆದರೆ ಕಳೆದ ಎರಡು ವರ್ಷಗಳಿಂದ ಸತತವಾಗಿ ಮಳೆ ಕೈಕೊಟ್ಟ ಪರಿಣಾಮ ಒಂದೆಡೆ ಮಳೆ ಕೊರತೆಯಾದರೆ ಮತ್ತೊಂದೆಡೆ ಸಾಲಭಾದೆಯಲ್ಲಿ ಸಿಲುಕಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹೆಚ್ಚಾಗಿದ್ದು, ಹಳೆಯ ಕೊಳವೆ ಬಾವಿಗಳಲ್ಲಿ ಆಳದವರೆಗೂ ಪೈಪ್ ಇಳಿಸಿ ನೀರೆತ್ತಲಾಗುತ್ತಿದ್ದರೂ ವಿದ್ಯುತ್ ಕೊರತೆಯಿಂದಾಗಿ ಸಮರ್ಪಕ ಸರಬರಾಜು ಮಾಡಲಾಗುತ್ತಿಲ್ಲ. ಓವರ್ ಹೆಡ್ ಟ್ಯಾಂಕುಗಳಿದ್ದರೂ ಇವುಗಳಿಗೆ ನೀರು ತುಂಬಿಸಿ ಎಷ್ಟೋ ಕಾಲವಾಗಿದೆ. ಬೀದಿಗೊಂದು ತೊಂಬೆಗಳಿದ್ದರೂ ಇವುಗಳಿಗೆ ನೀರು ತುಂಬಿಸುತ್ತಿಲ್ಲ. ಗ್ರಾಮಗಳಿಂದ ದೂರವಿರುವ ಕೊಳವೆ ಬಾವಿಗಳ ಬಳಿಯೇ ನೀರು ವಿತರಣೆ ಮಾಡಬೇಕಾಗಿದೆ. ಪರಿಣಾಮವಾಗಿ ಗೃಹಬಳಕೆಗೆ ಹಾಗೂ ಕುಡಿಯಲು ಅಗತ್ಯವಾದ ನೀರು ಸಂಗ್ರಹಿಸಲು ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಜಾನುವಾರುಗಳಿಗೂ ಮೇವು ಮತ್ತು ನೀರಿನ ಅಭಾವ ಉಂಟಾಗಿದ್ದು ಹಲವಾರು ಕಡೆ ಜಾನುವಾರುಗಳನ್ನು ಸಾಕಲಾಗದೆ ಮಾರಾಟ ಮಾಡಲು ಮುಂದಾಗಿದ್ದು ರೈತಾಪಿ ವರ್ಗ ಕಂಗಾಲಾಗಿದೆ. ಈ ಕೂಡಲೆ ಜಿಲ್ಲಾಡಳಿತವು ರೈತರ ನೆರವಿಗೆ ಧಾವಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News