ಅಂತರ್ಜಾತಿ ವಿವಾಹದಿಂದ ಮಾತ್ರ ಜಾತಿ ವಿನಾಶ ಸಾಧ್ಯ: ಡಾ.ನಾಗಭೂಷಣ್
ಹುಳಿಯಾರು, ಎ.18: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಭಿಪ್ರಾಯದಂತೆ ಅಂತರ್ಜಾತಿ ವಿವಾಹದಿಂದ ಮಾತ್ರ ಜಾತಿ ವಿನಾಶ ಸಾಧ್ಯ ಎಂದು ತುಮಕೂರು ವಿವಿಯ ಡಾ.ಡಿ.ವಿ.ಜಿ.ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ತಿಳಿಸಿದ್ದಾರೆ.
ಹುಳಿಯಾರು ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಮಕೂರು ವಿಶ್ವವಿದ್ಯಾ ನಿಲಯ ವಿಶೇಷ ಘಟಕ ಯೋಜನೆಯಡಿ "ಯುವಜನರು ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಅಭಿಯಾನ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ನಾಗರಿಕರ ರಕ್ತದಲ್ಲಿ ಇಂದು ಜಾತಿ ಹರಿದಾಡುತ್ತಿದ್ದು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ನಿವಾರಣೆಯಾಗದ ವಿನಃ ಜಾತಿಮುಕ್ತ ದೇಶವನ್ನು ಕಟ್ಟಲು ಸಾಧ್ಯವಿಲ್ಲ ಎಂದರು.
ಜಾತಿಗಳಲ್ಲಿರುವ ಉಪಜಾತಿಗಳು ಹೋದರೆ ಜಾತಿ ಏಕ ಪ್ರಭುತ್ವ ಸಾಧಿಸುತ್ತದೆ. ಸಹಪಂಕ್ತಿ ಭೋಜನ ಮನುಷ್ಯನನ್ನು ಒಂದುಗೂಡಿಸುತ್ತದೆಯಾದರೂ ಜಾತಿಯನ್ನು ಹೋಗಲಾಡಿಸುವುದಿಲ್ಲ. ಹಾಗಾಗಿ ಇವೆರಡೂ ಜಾತಿ ವಿನಾಶಕ್ಕೆ ಮದ್ದಲ್ಲ ಎಂದು ಅಂಬೇಡ್ಕರ್ ಸ್ಪಷ್ಟಪಡಿಸಿದ್ದಾರೆ ಎಂದು ಡಾ.ನಾಗಭೂಷಣ್ ತಿಳಿಸಿದರು.
ತುಮಕೂರು ವಿವಿ ಇತಿಹಾಸ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಎಂ.ಕೊಟ್ರೇಶ್ ಮಾತನಾಡಿ, ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಲ್ಲಿ ಬಂಧಿಸಲ್ಪಟ್ಟಿದ್ದ ಜಾತಿ ವ್ಯವಸ್ಥೆ ನಿರ್ಮೂಲನಕ್ಕೆ ಮೀಸಲಾತಿ ವ್ಯವಸ್ಥೆಯ ಸಂವಿಧಾನ ರೂಪಿಸಿದರು. ಆದರೆ 70 ವರ್ಷ ಕಳೆದರೂ ಇನ್ನೂ ಜಾತಿ ವ್ಯವಸ್ಥೆ ಭೂತ ಕಾಡುತ್ತಿದ್ದು ಉತ್ತರ ಹುಡುಕುವ ಪ್ರಯತ್ನ ಇನ್ನೂ ಸಮರ್ಪಕವಾಗಿ ನಡೆದಿಲ್ಲ ಎಂದರು.
ಪ್ರಾಂಶುಪಾಲ ಕೃಷ್ಣಮೂರ್ತಿ ಬಿಳಿಗೆರೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಈ.ಶಿವಣ್ಣ ಹಾಗೂ ಯುವ ಲೇಖಕ ಕಂಟಲಗೆರೆ ಗುರುಪ್ರಸಾದ್ ಮಾತನಾಡಿದರು. ಉಪನ್ಯಾಸಕರಾದ ಡಾ.ಬಾಳಪ್ಪ, ಪ್ರೊ.ಬಿ.ಅಶೋಕ ವೇದಿಕೆಯಲ್ಲಿದ್ದರು.