×
Ad

ಬೇಲಿ ತೆರವು ಪ್ರಕರಣ: ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧಾರ

Update: 2017-04-19 17:27 IST

ಮಡಿಕೇರಿ, ಎ.19 : ನಗರದ ಸಂಪಿಗೆ ಕಟ್ಟೆ ವ್ಯಾಪ್ತಿಯಲ್ಲಿ ತಾನು ಖರೀದಿಸಿರುವ 51 ಸೆಂಟ್ ಜಾಗದಲ್ಲಿ ಕಡಂಗ ಪ್ರದೇಶವಿದೆಯೆಂದು ಆರೋಪಿಸಿ, ಯಾವುದೇ ದಾಖಲೆಗಳಿಲ್ಲದೆ ಅಕ್ರಮ ಪ್ರವೇಶ ಮಾಡಿರುವ ನಗರಸಭಾ ಅಧ್ಯಕ್ಷರು ಹಾಗೂ ಮೂಡಾ ಅಧ್ಯಕ್ಷರ ವಿರುದ್ಧ ದೂರು ದಾಖಲಿಸುವುದಾಗಿ ಮೂಡಾದ ಮಾಜಿ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರಯ್ಯಾ ಅಬ್ರಾರ್ , ಎ.18 ರಂದು ತನ್ನ ಸ್ವಾಧೀನದ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರಾದ ಸಂಗೀತ ಪ್ರಸನ್ನ, ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪ್ರಸನ್ನ ಭಟ್ ಸೇರಿದಂತೆ ಇನ್ನೂ ಕೆಲವರ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.

ತಮ್ಮ ಒಡೆತನದಲ್ಲಿರುವ 51 ಸೆಂಟ್ ಜಾಗಕ್ಕೆ ಇತ್ತೀಚೆಗಷ್ಟೆ ಬೇಲಿ ನಿರ್ಮಿಸಲಾಗಿತ್ತು. ಆದರೆ, ಕಡಂಗ ಜಾಗ ಒತ್ತುವರಿಯಾಗಿದೆಯೆಂದು ಆರೋಪಿಸಿ ಮಂಗಳವಾರ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ನಗರಸಭಾ ಅಧ್ಯಕ್ಷರು ಮತ್ತು ಮೂಡಾ ಅಧ್ಯಕ್ಷರು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಬಾಹಿರವಾಗಿ ಬೇಲಿಯನ್ನು ತೆರವುಗೊಳಿಸಿದ್ದಾರೆ. ನಿಯಮಾನುಸಾರ ಖಾಸಗಿ ಜಾಗದೊಳಗೆ ಪ್ರವೇಶ ಮಾಡುವಾಗ ಜಾಗದ ಮಾಲಕರಿಗೆ ನೋಟಿಸ್ ನೀಡಿ, ಮಾಹಿತಿಯನ್ನು ನೀಡಬೇಕು. ಆದರೆ, ಇದು ಯಾವುದನ್ನೂ ಮಾಡದೆ, ಅಧಿಕಾರಿಗಳನ್ನು ಕರೆದೊಯ್ಯದೆ ಗೂಂಡಾಗಿರಿಯ ವರ್ತನೆಯನ್ನು ಪ್ರದರ್ಶಿಸಲಾಗಿದೆ ಎಂದು ಸುರಯ್ಯಾ ಅಬ್ರಾರ್ ಆರೋಪಿಸಿದರು.

ತಾವು ಖರೀದಿಸಿದ 51 ಸೆಂಟ್ ಜಾಗವನ್ನು ಸರ್ಕಾರಿ ಸರ್ವೇ ನಡೆಸಿ ಎಲ್ಲಾ ದಾಖಲೆಗಳನ್ನು ಹೊಂದಲಾಗಿದೆ. ದಾಖಲೆಗಳಲ್ಲಿ ಈ ಪ್ರದೇಶದಲ್ಲಿ ಕಡಂಗವಿಲ್ಲವೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಕಡಂಗ ಇರುವ ಬಗ್ಗೆ ನಗರಸಭೆಯ ಬಳಿ ಯಾವುದೇ ದಾಖಲೆಗಳಿಲ್ಲವೆಂದು ಅವರು ಹೇಳಿದರು. ತಮ್ಮ ಜಾಗದ ಪಕ್ಕದಲ್ಲಿರುವ ಜಾಗದ ಮಾಲಕರೊಬ್ಬರು ಜಲಮೂಲವಿರುವ ಪ್ರದೇಶದಲ್ಲೆ ನೂರಾರು ಲೋಡ್ ಮಣ್ಣನ್ನು ಹಾಕಿದ್ದು, ಇದರಿಂದ ಜಲಮೂಲಕ್ಕೆ ಧಕ್ಕೆಯಾಗಿದೆಯೇ ಹೊರತು, ತಾವು ಅಳವಡಿಸಿದ ಬೇಲಿಯಿಂದ ಯಾವುದೇ ಅನ್ಯಾಯವಾಗಿಲ್ಲವೆಂದರು.

ಸುದ್ದಿಗೋಷ್ಠಿಯಲ್ಲಿ ಸುರಯ್ಯಾ ಅಬ್ರಾರ್ ಅವರ ಪತಿ ವಿ.ಟಿ. ಅಬ್ರಾರ್, ಸಂಬಂಧಿಕರಾದ ವಿ.ಟಿ.ಅಸ್ಲಂ ಹಾಗೂ ನಾದಿಯಾ ಸಿರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News